

ಯಾದಗಿರಿ: ಅಂಗನವಾಡಿ ಶಾಲೆಯು ಮಕ್ಕಳ ಪ್ರಾಥಮಿಕ ಶಿಕ್ಷಣ ಕಲಿಕೆಯ ಬುನಾದಿಗೆ ಪೂರಕವಾಗಿದ್ದು, ಅಧಿಕಾರಿಗಳು ಮೂಲಸೌಕರ್ಯ ಒದಗಿಸಲು ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ವಡಿಗೇರಾ ತಾಲೂಕಿನ ಬೀರನಾಳ ಗ್ರಾಮದ ವಾರ್ಡ್ 01, ಬಬಲಾದ ಗ್ರಾಮದ ವಾರ್ಡ್ 02 ರಲ್ಲಿ ನಿರ್ಮಾಣವಾದ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿ ಹಾಗೂ ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ನೋಂದಣಿ ಪತ್ರ ವಿತರಿಸಿ ಅವರು ಮಾತನಾಡಿದರು.
ಹೊಸ ಮಾದರಿಯ ಅಂಗನವಾಡಿ ನೂತನ ಕಟ್ಟಡವು ವಿಶೇಷವಾಗಿದ್ದು, ಕಟ್ಟಡದ ಒಳಗೆ ಆಹ್ಲಾದಕರ ವಾತಾವರಣದಿಂದ ಕೂಡಿದ್ದು, ಮಕ್ಕಳು ಕಲಿಯಲು ಪೂರಕವಾದ ವಾತಾವರಣ ಕಲ್ಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಕೊಠಡಿ ನಿರ್ಮಾಣವೂ ಗುಣಮಟ್ಟದಿಂದ ಕೂಡಿದೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ನಿರ್ವಹಿಸಿ, ಮುಂದಿನ ಮಕ್ಕಳಿಗೆ ಅನುಕೂಲವಾಗುವಂತೆ ಕಾಪಾಡಿಕೊಳ್ಳಬೇಕು. ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಯುತ್ತಾರೆ ಎಂದು ಸಲಹೆ ನೀಡಿದರು.
ನಮ್ಮ ಸರ್ಕಾರವು ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಚುನಾವಣೆ ಪೂರ್ವದಲ್ಲಿ ಗ್ಯಾರಂಟಿಗಳ ಆಶ್ವಾಸನೆ ಕೊಟ್ಟಿತ್ತು. ಅವುಗಳನ್ನು ಈಡೇಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ ಎಂದರು.
ನಮ್ಮ ಜಿಲ್ಲೆಯಲ್ಲಿ ಸುಮಾರು 2 ಲಕ್ಷದ 48 ಸಾವಿರ ಕುಟುಂಬಗಳಿದ್ದು ಅದರಲ್ಲಿ 1 ಲಕ್ಷದ 40 ಸಾವಿರ ಅರ್ಜಿಗಳು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿದ್ದು ಇವರಿಗೆ ತಿಂಗಳಿಗೆ 2 ಸಾವಿರ ರೂಪಾಯಿಗಳನ್ನು ಹಾಕಲಾಗುತ್ತದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಬೇಕು ಆದ್ದರಿಂದ ಎಲ್ಲರೂ ನೋಂದಣಿ ಮಾಡಿಕೊಳ್ಳಿ ಎಂದು ಸಚಿವರು ಸಾರ್ವಜನಿಕರಿಗೆ ಕೋರಿದರು.
*ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಮಾತನಾಡಿ*; ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮುಖಾಂತರ ಸರ್ಕಾರವು ನುಡಿದಂತೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದಂತೆ ಹಿಂದಿನ ಸರ್ಕಾರ ನಿಲ್ಲಿಸಿದ ಭಾಗ್ಯಗಳನ್ನು ಗ್ಯಾರಂಟಿಗಳ ಜೊತೆಗೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರ್ಕಾರದ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು.