ಮೂಲಭೂತ ಕರ್ತವ್ಯಗಳ ಪಾಲನೆಯೂ ಅಗತ್ಯ: ಜಿಲ್ಲಾ ನ್ಯಾಯಾಧೀಶೆ ವಿಮಲಾ ಆರ್.ನಂದಗಾಂವ್ ಸಲಹೆ

mysore
Published on

ಮೈಸೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಕಾಯಂ ಜನತಾ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ವಿಮಲಾ ಆರ್.ನಂದಗಾಂವ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ವತಿಯಿಂದ ಮಹಾಜನ ಕಾನೂನು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಸಂವಿಧಾನವು ವಿಶ್ವದ ಅತ್ಯಂತ ಸುದೀರ್ಘವಾದ ಲಿಖಿತ ಸಂವಿಧಾನವಾಗಿದೆ. ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ತತ್ವಗಳ ಮೇಲೆ ಒತ್ತು ನೀಡುವ ದೇಶದ ಪ್ರಜಾಸತ್ತಾತ್ಮಕ ನೀತಿಯ ತಳಹದಿಯಾಗಿದೆ. ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ತಳಹದಿಯನ್ನು ಒದಗಿಸಿಕೊಟ್ಟ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.

‘ಸಂವಿಧಾನ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಸಮಕಾಲಿನ ಭಾರತ’ ಕುರಿತು ಉಪನ್ಯಾಸ ನೀಡಿದ ರಾಜಕೀಯ ವಿಜ್ಞಾನಿ ಪ್ರೊ.ಎಸ್.ಎಂ.ರಾಜಶೇಖರ್ ಮಾತನಾಡಿ, ಸಂವಿಧಾನ ರಚನೆಯಲ್ಲಿ ಸಂವಿಧಾನ ಕರಡು ರಚನಾ ಸಮಿತಿಯ ಪಾತ್ರ ಮತ್ತು ಅದರಲ್ಲೂ ‘ಸಂವಿಧಾನ ಪಿತಾಮಹ’ ಡಾ.ಅಂಬೇಡ್ಕರ್ ಅವರ ತ್ಯಾಗ, ಪರಿಶ್ರಮ ಇದೆ. ಇಡೀ ವಿಶ್ವಾದ್ಯಂತ ಡಾ. ಅಂಬೇಡ್ಕರ್ ಚಿಂತನೆಗೆ ಮನ್ನಣೆ ನೀಡಲಾಗುತ್ತದೆ. ಅಂತಹ ವಿಶ್ವ ಮಾನವನಿಗೆ ಗೌರವ ಸಮರ್ಪಿಸುವ ದಿನವೇ ಸಂವಿಧಾನ ದಿನವಾಗಿದೆ ಎಂದರು.

ಭಾರತ ಸಂವಿಧಾನ ನಮ್ಮ ಹೆಮ್ಮೆ, ಅದು ಕಾನೂನುಬದ್ಧ ಪಾವಿತ್ರ್ಯತೆಯನ್ನು ಹೊಂದಿರುವ ಗ್ರಂಥವಾಗಿದೆ. ಇಂತಹ ಭಾರತದ ಸಂವಿಧಾನದ ಸ್ಫೂರ್ತಿ ಮತ್ತು ಆಶಯಗಳನ್ನು ಗೌರವಿಸುವುದು, ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆ ಕರ್ತವ್ಯವಾಗಿದೆ. ಮೂಲಭೂತ ಹಕ್ಕುಗಳಂತೆ ಮೂಲಭೂತ ಕರ್ತವ್ಯಗಳನ್ನು ಸರಿಸಮಾನವಾಗಿ ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಮೈವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್, ಮಹಾಜನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ, ಪ್ರಾಂಶುಪಾಲೆ ಕೆ.ಸೌಮ್ಯ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net