

ಬೀದರ್: ಬಸವಭೂಮಿ ಬಸವಕಲ್ಯಾಣದಲ್ಲಿ 12ನೇ ಶತಮಾನದ ಮೂಲ ಅನುಭವ ಮಂಟಪ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲು ಆಗ್ರಹಿಸಿ ಮೂಲ ಅನುಭವ ಮಂಟಪ ಸ್ಮಾರಕ ಹೋರಾಟ ಸಮಿತಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಇಲ್ಲಿನ ಮೋಹನ್ ಮಾರ್ಕೆಟ್ ನ ಹರಳಯ್ಯ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಜಗತ್ತಿನ ಪ್ರಥಮ ಪಾರ್ಲಿಮೆಂಟ್ ಖ್ಯಾತಿ ಹೊಂದಿರುವ ಅನುಭವ ಮಂಟಪವು ಸಮಾಜಕ್ಕೆ ಸಮತೆ, ಸಮಾನತೆ ಸಂದೇಶ ನೀಡಿದೆ. ಇಂಥ ಐತಿಹಾಸಿಕ ಸ್ಮಾರಕವನ್ನು ಮೂಲ ಸ್ಥಳದಲ್ಲಿ ನಿರ್ಮಿಸಿದರೆ ಮಾತ್ರ ಅದಕ್ಕೆ ಮೆರಗು, ಮಹತ್ವ ಬರಲು ಸಾಧ್ಯ ಎಂದು ಪ್ರಮುಖರು ಹೇಳಿದರು.
900 ವರ್ಷ ಹಿಂದೆ ಬಸವಕಲ್ಯಾಣದಲ್ಲಿ ಬಸವಾದಿ ಶರಣರು ಅನುಭವ ಮಂಟಪ ಸ್ಥಾಪಿಸಿದರು. ಸಮ ಸಮಾಜದ ಹೊಸ ಕ್ರಾಂತಿಗೆ ಮುನ್ನುಡಿ ಬರೆದರು. ಜಾತಿ ರಹಿತ, ಲಿಂಗ ರಹಿತ, ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಹಕ್ಕನ್ನು ಅನುಭವ ಮಂಟಪದ ಮೂಲಕ ನೀಡಿದರು. ಹೀಗಾಗಿ ಇದು ಸಾಮಾನ್ಯ ಕಟ್ಟಡವಲ್ಲ. ಇದನ್ನು ಸ್ಥಳದಲ್ಲಿ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಸಂಬಂಧ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಲಾಯಿತು. ಐದು ಸಾವಿರ ವರ್ಷ ಹಿಂದಿನ ರಾಮಲಲ್ಲಾ ಅಯೋಧ್ಯೆಯ ಮೂಲ ಸ್ಥಳದಲ್ಲಿ ಭವ್ಯ ರಾಮ ಮಂದಿರದ ರೂಪದಲ್ಲಿ ನಿರ್ಮಾಣ ಆಗುತ್ತಿರುವಾಗ 900 ವರ್ಷ ಹಿಂದಿನ ಅನುಭವ ಮಂಟಪ ಸಹ ಮೂಲ ಸ್ಥಳದಲ್ಲಿ ಆಗಬೇಕೆಂಬುದು ಬಸನಾನುಯಾಯಿಗಳ ಬೇಡಿಕೆ ಎಂದು ಗಮನ ಸೆಳೆಯಲಾಗಿದೆ.
ಸಮಿತಿ ಸಂಸ್ಥಾಪಕ ಸಂಚಾಲಕ ಓಂಪ್ರಕಾಶ ರೊಟ್ಟೆ, ಜಿಲ್ಲಾಧ್ಯಕ್ಷ ಕಿರಣ್ ಖಂಡ್ರೆ, ಶ್ರೀಕಾಂತ ಬೋರಾಳೆ, ನಾಗಪ್ಪ ಸಿಂಧೆ, ರವಿ ರಾಮಲು, ಪಾಪಯ್ಯ ಸಿಂಧೆ, ದತ್ತು ಕರ್ಕಾಳೆ, ಮಲ್ಲಿಕಾರ್ಜುನ ಹಳ್ಳೆ, ನಾಗೇಶ ಬಿಡವೆ, ಭರತ ಖೇಡಕರ್, ನಂದುಕುಮಾರ ಬಕ್ಕಾ ಇತರರಿದ್ದರು.
ಮೂಲ ಸ್ಥಳ ಖಾಸಗಿ ಒಡೆತನದಲ್ಲಿ
12ನೇ ಶತಮಾನದ ಅನುಭವ ಮಂಟಪ ಬಸವಕಲ್ಯಾಣ ನಗರದ ಮಧ್ಯ ಭಾಗದಲ್ಲಿತ್ತು. ಆ ಸ್ಥಳ ಪ್ರಸ್ತುತ ಖಾಸಗಿ ಒಡೆತನಕ್ಕೆ ಸೇರಿದ ಆಸ್ತಿಯಾಗಿದೆ ಎಂದು ಸಮಿತಿ ದೂರಿದೆ. ಖಾಸಗಿ ಒಡೆತನದಲ್ಲಿರುವ ಈ ಆಸ್ತಿಯನ್ನು ಸರ್ಕಾರ ಖರೀದಿಸಿ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಅಧೀನಕ್ಕೆ ಒಳಪಡಿಸಬೇಕು. ಅಲ್ಲಿ 12ನೇ ಶತಮಾನದ ಮೂಲ ಅನುಭವ ಮಂಟಪ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಲಾಗಿದೆ.