ಮೂಲ ಸೌಲಭ್ಯ ಪಡೆಯುವುದು ಮಕ್ಕಳ ಹಕ್ಕು

21 Ark 01
Published on

ಅರಕೇರಾ: ಮಕ್ಕಳ ಹಕ್ಕುಗಳ ರಕ್ಷಣೆ ಸಂವಿಧಾನದ ಮೂಲ ಆಶಯವಾಗಿದ್ದು, ಸರ್ಕಾರದ ಪ್ರಮುಖ ಜವಾಬ್ದಾರಿಯೂ ಆಗಿದೆ ಎಂದು ಪಿಡಿಒ ವೆಂಕೋಬ ನಾಯಕ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಬ್ರೆಡ್ಸ್ ಸಂಸ್ಥೆ, ಅಜೀಂ ಪ್ರೇಮ್ ಜೀ ಫೌಂಡೇಷನ್, ಡಾನ್ ಬಾಸ್ಕೋ, ಜಿಪಂ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗ್ರಾಪಂ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಬುಧವಾರ ಮಾತನಾಡಿದರು. ಮಕ್ಕಳು ಸಂತೋಷದಿಂದ ಬಾಲ್ಯ ಕಳೆದರೆ ಸಮಾಜದ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಓದುವ ಶಾಲೆ ಮತ್ತು ವಾಸಿಸುವ ಸ್ಥಳದಲ್ಲಿ ಮೂಲ ಸೌಲಭ್ಯ ಪಡೆಯುವ ಹಕ್ಕು ಹೊಂದಿದ್ದಾರೆ ಎಂದರು.

ಕ್ರೈ ಸಂಸ್ಥೆ ಸಮಾಲೋಚಕರಾದ ಸಿದ್ದಲಿಂಗಪ್ಪ ಕಾಕರಗಲ್, ಮಲ್ಲಯ್ಯ ಖಾನಾಪುರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ವಿಜ್ಞಾನ ಪ್ರಯೋಗಾಲಯ, ಕಾಂಪೌಂಡ್, ಸ್ವಚ್ಛತೆ, ಶೌಚಗೃಹ ಸಮಸ್ಯೆ ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಹಾಳ ಜಾಡಲದಿನ್ನಿ ಶಾಲೆಯಲ್ಲಿ 167 ವಿದ್ಯಾರ್ಥಿಗಳಿಗೆ ಕೇವಲ ಎರಡು ಶೌಚಗೃಹಗಳಿದ್ದು, ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಶುದ್ಧ ಕುಡಿಯುವ ನೀರು ಪೂರೈಸಬೇಕು. ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಕಟ್ಟಡ ನಿರ್ಮಿಸಬೇಕು. ಅರಳಿ ಮರದ ಕೆಳಗೆ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಗ್ರಾಪಂ ವ್ಯಾಪ್ತಿಯ ಶಾಲೆಗಳಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಪಿಡಿಒ ವೆಂಕೋಬ ನಾಯಕ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net