ಮೂಲ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

Published on

ಮೈಸೂರು: ಮಹಾರಾಣಿ ವಾಣಿಜ್ಯ, ಕಲಾ ಹಾಗೂ ವಿಜ್ಞಾನ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎಐಡಿಎಸ್‌ಒನಿಂದ ಕಾಲೇಜು ಶಿಕ್ಷಣ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಿ. ವಿಜಯಲಕ್ಷ್ಮೀ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಶತಮಾನೋತ್ಸವ ಪೂರೈಸಿರುವ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಕಾರ್ಯಕರ್ತರು ದೂರಿದರು.
ವಿದ್ಯಾರ್ಥಿನಿಯರ ಸಂಖ್ಯೆಗೆ ತಕ್ಕಂತೆ ಕೊಠಡಿಗಳಿಲ್ಲ. ಕುಸಿದು ಬಿದ್ದಿದ್ದ ರಸಾಯನಶಾಸ್ತ್ರ ಪ್ರಯೋಗಾಲಯದ ನವೀಕರಣ ಆರಂಭವಾಗಿಲ್ಲ. ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿನಿಯರು ಮಹಾರಾಣಿ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಕನಿಷ್ಠ ಸೌಲಭ್ಯವೂ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಬಹುತೇಕ ವಿದ್ಯಾರ್ಥಿನಿಯರು ಬಡ ರೈತ ಕಾರ್ಮಿಕ, ಮಧ್ಯಮ ವರ್ಗದ ಮಕ್ಕಳು. ನೂರಾರು ಕಿಲೋಮೀಟರ್ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ನಿಲಯದ ವ್ಯವಸ್ಥೆಯೇ ಇಲ್ಲ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದರು.
ಪಡುವಾರಹಳ್ಳಿ ಬಳಿ ಇರುವ ಮಹಾರಾಣಿ ವಾಣಿಜ್ಯ ಕಾಲೇಜಿಗೆ ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ನಿತ್ಯ ವಿದ್ಯಾರ್ಥಿನಿಯರು ಎರಡು-ಮೂರು ಕಿ.ಮೀ. ನಡೆಯುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳಿಂದ ಮುಕ್ತಿಗೊಳಿಸಿ ಉತ್ತಮ ವ್ಯಾಸಂಗದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಲಾಯಿತು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ನಿರ್ಮಿಸಬೇಕು, ಕುಸಿದು ಬಿದ್ದಿದ್ದ ರಸಾಯನಶಾಸ್ತ್ರ ಪ್ರಯೋಗಾಲಯ ಮರು ನಿರ್ಮಿಸಬೇಕು, ಕಾಲೇಜಿನ ಆವರಣದೊಳಗೆ ಇಂದಿರಾ ಕ್ಯಾಂಟೀನ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು, ಶೌಚಗೃಹ ಸ್ವಚ್ಛತೆ, ಕುಡಿಯುವ ನೀರು ಇನ್ನಿತರ ಮೂಲ ಸೌಕರ್ಯ ಒದಗಿಸಬೇಕು, ಮಹಾರಾಣಿ ವಾಣಿಜ್ಯ ಕಾಲೇಜಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್, ಕಾರ್ಯದರ್ಶಿ ಚಂದ್ರಕಲಾ, ವಿದ್ಯಾರ್ಥಿಗಳಾದ ಚಂದನಾ, ಚಂದ್ರಿಕಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net