

ಚಿತ್ರದುರ್ಗ: ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಅಲೆಮಾರಿ ಬುಡ್ಗ ಜಂಗಮ ಸಮುದಾಯದವರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನಗರ ಹಾಗೂ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಟೆಂಟ್‌ಗಳನ್ನು ನಿರ್ಮಿಸಿಕೊಂಡು ಮಳೆ, ಚಳಿ, ಗಾಳಿ ಲೆಕ್ಕಿಸದೆ ಜೀವಿಸುತ್ತಿರು ವ ಅಲೆಮಾರಿ ಬುಡ್ಗ ಜಂಗಮರು ರಸ್ತೆ, ನೀರು, ದೀಪ, ಚರಂಡಿ ಮತ್ತಿತರ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ದಾವಣಗೆರೆ ರಸ್ತೆಯ ಕಾಪ್ರಾ ಪೆಟ್ರೋಲ್ ಬಂಕ್ ಬಳಿ ಬಹು ವರ್ಷಗಳಿಂದ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ರಾತ್ರಿ ವೇಳೆ ವಿಷ ಜಂತುಗಳಿಂದ ಕಚ್ಚಿಸಿಕೊಂಡಿರುವುದುಂಟು. ಅಲ್ಲಿ ಕರಡಿಗಳ ಹಾವಳಿ ಆಂತಕವಿದೆ. ಜಿಲ್ಲಾಡಳಿತ ಗಮನಹರಿಸಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಧಮ್ಮ ಸಾಂಸ್ಕೃತಿಕ ಕೇಂದ್ರದ ಆರ್. ವಿಶ್ವಸಾಗರ್, ಭ್ರಷ್ಟಾಚಾರ ವಿರೋಧಿ ಆಂದೋಲನದ ಜಿಲ್ಲಾಧ್ಯಕ್ಷ ಹನುಮಂತಪ್ಪ ದುರ್ಗ ಒತ್ತಾಯಿಸಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ಜಿಲ್ಲಾ ಅಲೆಮಾರಿ ಬುಡ್ಗ ಜಂಗಮ ಒಕ್ಕೂಟದ ಜಿಲ್ಲಾಧ್ಯಕ್ಷ ವಸಂತಕುಮಾರ್, ಕೆ.ಎನ್. ನಾಗರಾಜ, ವೀರೇಶ್, ವಿ. ಮಾರಪ್ಪ, ವಸಂತ, ಸುಜಾತಮ್ಮ, ಸುಂಕಮ್ಮ, ವಿಜಯಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.