ಮೂಲ ಸೌಕರ್ಯಕ್ಕೆ 100 ಲಕ್ಷ ಕೋಟಿ ರೂ.

h28-Railway 1
Published on

ಹುಬ್ಬಳ್ಳಿ: 2024ರ ವೇಳೆಗೆ ದೇಶದ ಮೂಲ ಸೌಲಭ್ಯಗಳ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ. ಹಾಗೂ ರೈಲ್ವೆ ಯೋಜನೆಗಳಿಗೆ ಮುಂದಿನ 10 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ವೆಚ್ಚ ಮಾಡುವ ಮಹದಾಸೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಕಾರ್ಯ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ದೇಸಾಯಿ ವೃತ್ತದಲ್ಲಿ ನಿರ್ವಿುಸಲಾಗಿರುವ ರಸ್ತೆ ಮೇಲ್ಸೇತುವೆಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇನ್ನೈದು ವರ್ಷದಲ್ಲಿ ದೇಶದಲ್ಲಿ ಈಗಾಗಲೇ ಘೋಷಣೆಯಾಗಿರುವ ರೈಲ್ವೆ ಮಾರ್ಗ ಡಬ್ಲಿಂಗ್, ವಿದ್ಯುದೀಕರಣ ಕಾರ್ಯ ಮುಗಿಯಬೇಕು. ಡೀಸೆಲ್ ಮೇಲೆ ಮಾಡುತ್ತಿರುವ ಖರ್ಚು ಉಳಿಯಬೇಕಾದರೆ ಸೌರಶಕ್ತಿ ಬಳಕೆ ಹೆಚ್ಚಬೇಕಾಗಿದೆ. ಸದ್ಯ 175 ಗಿಗಾ ವ್ಯಾಟ್ ಇರುವ ಉತ್ಪಾದನೆಯನ್ನು 400 ಗಿಗಾ ವ್ಯಾಟ್​ಗೆ ಹೆಚ್ಚಿಸುವ ಗುರಿ ಇದೆ ಎಂದರು.

ಕಲ್ಲಿದ್ದಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ ಭಾರತ ಈಗಲೂ 235 ದಶಲಕ್ಷ ಟನ್ ಆಮದು ಮಾಡಿಕೊಳ್ಳುತ್ತಿದೆ. ದೇಶಿಯ ಉತ್ಪನ್ನಗಳಿಗೆ ಆದ್ಯತೆ ನೀಡುವುದು, ಆಮದು ತಡೆಯುವ ಸಲುವಾಗಿ ದೇಶದಲ್ಲೇ ಕಲ್ಲಿದ್ದಲು ಉತ್ಪಾದನೆ ಮಾಡುವ ಉದ್ದೇಶ ಹೊಂದಲಾಗಿದೆ. ಕಲ್ಲಿದ್ದಲು ನಿಕ್ಷೇಪದಿಂದ ಹೊರತೆಗೆಯಲು ಜಾಗತಿಕ ಟೆಂಡರ್ ಕರೆಯಲಾಗುವುದು ಎಂದರು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇನ್ನೆರಡು ಪ್ಲಾಟ್​ಫಾಮ್ರ್ ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜೋಶಿ ಸೂಚಿಸಿದರು.

ಮುಂದಾಲೋಚನೆ ಇಲ್ಲದ ಅಧಿಕಾರಿಗಳು: ರಾಜ್ಯದ ಕೆಲ ಅಧಿಕಾರಿಗಳಿಗೆ, ಇಂಜಿನಿಯರ್​ಗಳಿಗೆ ಮುಂದಾಲೋಚನೆ ಇಲ್ಲ. ದೇಸಾಯಿ ಸರ್ಕಲ್ ರಸ್ತೆ ಮೇಲ್ಸೇತುವೆ ಕೆಲಸ ಚಾಲು ಆದ ನಂತರ ಬಹಳಷ್ಟು ಬದಲಾವಣೆಯಾದವು. ಮೊದಲೇ ಯೋಚಿಸಿದ್ದರೆ ಅತ್ಯಂತ ಸುಂದರ ಮೇಲ್ಸೇತುವೆ ಮಾಡಬಹುದಿತ್ತು. ಈಗಲೂ ಸರ್ವಿಸ್ ರಸ್ತೆ ಸರಿಯಾಗಿ ಆಗಿಲ್ಲ ಎಂದು ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಕಟ್ಟಡ ಪರವಾನಗಿ ಸಂಬಂಧ ಶೀಘ್ರ ಅಧಿಕಾರಿಗಳ ಸಭೆ ಕರೆಯಿರಿ, ಒಂದಿಷ್ಟು ಕಠಿಣ ನಿಯಮಾವಳಿಗಳನ್ನು ರೂಪಿಸಿ ಅದರಂತೆ ಕಟ್ಟಡ ಪರವಾನಗಿ ನೀಡುವಂತಾಗಲಿ, ಕೆಲವೆಡೆ ಮೂರು- ನಾಲ್ಕು ಗುಂಟೆ ಜಾಗದಲ್ಲೂ ಅಪಾರ್ಟ್​ವೆುಂಟ್ ಕಟ್ಟಲು ಮನಸೋ ಇಚ್ಛೆ ಅನುಮತಿ ನೀಡಿದ್ದಾರೆ. ಸೆಟ್​ಬ್ಯಾಕ್, ರ್ಪಾಂಗ್ ಯಾವುದೂ ಇಲ್ಲ. ಈ ಬಗ್ಗೆ ಚಿಂತನೆ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಜೋಶಿ ಮನವಿ ಮಾಡಿದರು.

ಭೂಸ್ವಾಧೀನಕ್ಕೆ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮೇಲ್ಸೇತುವೆ ಬಳಿ ಸರ್ವಿಸ್ ರಸ್ತೆ ಮಾಡಬೇಕಾಗಿದೆ. ಅದಕ್ಕಾಗಿ ಬೇಕಾಗುವ ಭೂಮಿ ಸ್ವಾಧೀನಕ್ಕೆ ಜಿಲ್ಲಾಧಿಕಾರಿಗೆ ಶೀಘ್ರ ಸೂಚನೆ ನೀಡಲಿದ್ದೇನೆ, ನಗರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇನ್ನಷ್ಟು ರೈಲ್ವೆ ಅಂಡರ್ ಪಾಸ್, ಸೇತುವೆ ನಿರ್ವಣಕ್ಕೆ ಚಾಲನೆ ನೀಡಲಿದ್ದೇವೆ ಎಂದರು.

ಉಣಕಲ್ಲ, ಅಮರಗೋಳ ಎಪಿಎಂಸಿ ಬಳಿ ಸೇತುವೆ ನಿರ್ವಿುಸಲು ಲೋಕೋಪಯೋಗಿ ಇಲಾಖೆ ಕೈಜೋಡಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಫೆ. 14ಕ್ಕೆ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ. ದಾವೋಸ್ ಭೇಟಿ ಫಲಪ್ರದವಾಗಿದೆ. ರಾಜ್ಯದ ಎರಡನೇ ಹಂತದ ನಗರಗಳತ್ತ ಬರಲು ಹೂಡಿಕೆದಾರರು ಮನಸ್ಸು ಮಾಡುತ್ತಿದ್ದಾರೆ ಎಂದರು. ಬೇಲೆಕೇರಿ ಬಂದರು ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸೂಚನೆ ನೀಡಿದ್ದಾರೆ ಎಂದರು.

ವಿಜಯಪುರ ಇಂಟರ್​ಸಿಟಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ರೈಲ್ವೆ ಇಲಾಖೆಯಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿವೆ. ಯೋಜನೆಗಳು ತ್ವರಿತ ಗತಿಯಲ್ಲಿ ಜಾರಿಯಾಗುತ್ತಿವೆ. ಫೆ. 15ರಿಂದ ವಿಜಯಪುರ- ಹುಬ್ಬಳ್ಳಿ ನಿತ್ಯ ಇಂಟರ್​ಸಿಟಿ ರೈಲು ಓಡಿಸಲಾಗುವುದು. ಹೊಸ ಯೋಜನೆ ಘೋಷಣೆ ಮಾಡದೇ ಈಗಾಗಲೇ ಘೋಷಿತ ಯೋಜನೆಗಳ ಕಾಮಗಾರಿ ಮುಗಿಸಲು ಪಣ ತೊಡಲಾಗಿದೆ. ವಿದ್ಯುದೀಕರಣ ಮಾಡಿ 13 ಸಾವಿರ ಕೋಟಿ ರೂ. ಡೀಸೆಲ್ ಮೇಲಿನ ಖರ್ಚು ಉಳಿಸಲಿದ್ದೇವೆ ಎಂದರು.

ಹುಬ್ಬಳ್ಳಿ- ಬೆಂಗಳೂರು ಐದು ತಾಸಿನ ರೈಲಿನ ಬಗ್ಗೆ ಯೋಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದಕ್ಕಾಗಿ ಸೌಕರ್ಯ ಒದಗಿಸುವ ಕೆಲಸ ನಡೆದಿದೆ. ಇಂಜಿನಿಯರ್​ಗಳು ಚುರುಕಿನಿಂದ ಕೆಲಸ ಮಾಡಬೇಕೆಂದು ಹೇಳಿದರು.

ರೈಲ್ವೆ ಮೇಲ್ಸೇತುವೆ ನಿರ್ವಣದ ಗುತ್ತಿಗೆದಾರರಾದ ಸ್ವರ್ಣ ಗ್ರುಪ್ ಆಫ್ ಕಂಪನಿಯ ಡಾ. ವಿ.ಎಸ್.ವಿ. ಪ್ರಸಾದ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇತರರು ಇದ್ದರು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಆರ್​ಎಂ ಅರವಿಂದ ಮಳಖೇಡ ವಂದಿಸಿದರು.

ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಲು ಸೂಚನೆ: ರೈಲುಗಳ ಸಂಚಾರಕ್ಕೆ ವೇಗ ನೀಡುವುದು, ಹೊಸ ಮಾರ್ಗ ನಿರ್ಮಾಣ ಸೇರಿ ಉತ್ತರ ಕರ್ನಾಟಕದ ವಿವಿಧ ರೈಲ್ವೆ ಸೌಲಭ್ಯಗಳ ಕುರಿತು ಹುಬ್ಬಳ್ಳಿ ರೈಲ್ ಸೌಧದಲ್ಲಿ ಮಂಗಳವಾರ ಈ ಭಾಗದ ಸಂಸದರು ಹಾಗೂ ಶಾಸಕರ ಸಭೆ ನಡೆಯಿತು.

ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ, ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ತೀವ್ರಗೊಳಿಸುವ ಬಗ್ಗೆ ರ್ಚಚಿಸಲಾಯಿತು.

ವಲಯ ವ್ಯಾಪ್ತಿಯ ಅಧಿಕಾರಗಳನ್ನು ಬಳಸಿ ವಿವಿಧ ಕಾಮಗಾರಿಗಳಿಗೆ ವೇಗ ನೀಡುವಂತೆ ನೈಋತ್ಯ ರೈಲ್ವೆ ವಲಯ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಅವರಿಗೆ ಸೂಚನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ತಮ್ಮ ಅಧಿಕಾರ ಮೀರಿ ಇರುವ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮುಖಾಂತರ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಗೋಲಗುಂಬಜ ರೈಲು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಮೇಲ್ವಿಚಾರಣೆ ನಡೆಸಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂದಿತು.

ಬಾಗಲಕೋಟ-ಕುಡಚಿ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಚುರುಕು ನೀಡಲು ಹಾಗೂ ಇದಕ್ಕಾಗಿ 1,500 ಎಕರೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯವನ್ನು ತೀವ್ರಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು. ಬಾಗಲಕೋಟ ಮತ್ತು ಖಜ್ಜಿಡೊಣಿ ಮಧ್ಯೆ ರೈಲು ಸಂಚಾರ ಪುನರ್ ಆರಂಭಿಸಲು ತೀರ್ವನಿಸಲಾಯಿತು.

ಸಂಸದರಾದ ವಿಜಯಪುರದ ರಮೇಶ ಜಿಗಜಿಣಗಿ, ಬಾಗಲಕೋಟದ ಪಿ.ಸಿ. ಗದ್ದಿಗೌಡರ, ಚಿಕ್ಕೋಡಿಯ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ, ಬಾಗಲಕೋಟದ ವೀರಣ್ಣ ಚರಂತಿಮಠ , ರಾಯಬಾಗದ ದುರ್ಯೋಧನ ಐಹೊಳೆ, ಹುಬ್ಬಳ್ಳಿ ಡಿಆರ್​ಎಂ ಅರವಿಂದ ಮಾಲಖೇಡೆ ಮತ್ತಿತರರಿದ್ದರು.

ಅತ್ಯಂತ ಕ್ಲಿಷ್ಟಕರ ಹಾಗೂ ಸವಾಲಾಗಿದ್ದ ಈ ಮೇಲ್ಸೇತುವೆ ನಿರ್ವಣಕ್ಕೆ ಮೂರು ಸಲ ಟೆಂಡರ್ ಕರೆದರೂ ಯಾರೂ ಹಾಕಿರಲಿಲ್ಲ. ನಾಲ್ಕನೇ ಬಾರಿ ಕರೆದಾಗ ಟೆಂಡರ್ ಹಾಕಿ ಡಿಸೈನ್ ಸಿದ್ಧಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಸೀಮಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ ಕೊಟ್ಟಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಇನ್ನೂ 5 ಕೋಟಿ ರೂ. ಬಿಲ್ ಬಾಕಿ ಬರಬೇಕಿದೆ. | ಡಾ. ವಿ.ಎಸ್.ವಿ. ಪ್ರಸಾದ, ಸ್ವರ್ಣ ಗ್ರುಪ್ ಆಫ್ ಕಂಪನಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net