ಮೂಲ ಸೌಕರ್ಯ ಕಲ್ಪಿಸುವಲ್ಲಿ ಆಡಳಿತ ಮಂಡಳಿ ವಿಫಲ

9-pnp 1
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು ಮಾತನಾಡಿದರು.
Published on

ಪಾಂಡವಪುರ; ತಾಲೂಕಿನ ಹರಳಹಳ್ಳಿ ಬಳಿ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನಗಳನ್ನು ವಿತರಿಸಲಾಗಿದ್ದು, ಇಲ್ಲಿಗೆ ಮೂಲ ಸೌಕರ್ಯ ಕಲ್ಪಿಸಲು ಆಡಳಿತ ಮಂಡಳಿ ವಿಫಲವಾಗಿದೆ ಎಂದು ಷೇರುದಾರರು ಆರೋಪಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿಷಯವನ್ನು ಚರ್ಚಿಸಿದ ಷೇರುದಾರರು, ಸುಮಾರು ವರ್ಷಗಳ ಹಿಂದೆಯೇ ಇಲ್ಲಿ ನಿವೇಶನಗಳನ್ನು ವಿತರಿಸಲಾಗಿದೆ. ಆದರೆ ಈವರೆಗೂ ಸಂಘದ ಆಡಳಿತ ಮಂಡಳಿ ಮೂಲ ಸೌಕರ್ಯ ಒದಗಿಸಿಲ್ಲ. ನಾವು ಖರೀದಿಸಿರುವ ನಿವೇಶನದಲ್ಲಿ ಮನೆ ನಿರ್ಮಿಸಲು ಹೋದರೆ ಜಾಗದ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ ಕೆಲವರು ತಡೆಯೊಡ್ಡುತ್ತಾರೆ ಎಂದು ದೂರಿದರು.

ತಾಲೂಕಿನ ಚಂದ್ರೆ ಬಳಿ ಖರೀದಿಸಿರುವ ಜಮೀನಿನಲ್ಲಿ ಫಲಾನುಭವಿಗಳಿಗೆ ಮುಂದಿನ ಮಹಾಸಭೆಯೊಳಗೆ ನಿವೇಶನ ಹಂಚಿಕೆಯಾಗಬೇಕು ಎಂದು ಷೇರುದಾರರು ಆಗ್ರಹಿಸಿದರು.

ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್ ಮಾತನಾಡಿ, ಚಂದ್ರೆ ಬಳಿ ನಿವೇಶನ ಹಂಚಲು ಖರೀದಿಸಿರುವ ಜಮೀನಿನ ಮಾಲೀಕನಿಗೆ ಚೆಕ್ ಮೂಲಕ ಹಣ ನೀಡಲಾಗಿದೆ. ಜಮೀನು ಮಾಲೀಕ ಈಗಾಗಲೇ ನ್ಯಾಯಾಲಯದಲ್ಲಿ ಜಮೀನು ಮಾರಾಟ ಮಾಡುವ ಬಗ್ಗೆ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾನೆ. ನಾವು ನೀಡಿರುವ 1.30 ಕೋಟಿ ರೂ. ಮೌಲ್ಯಕ್ಕೆ ಸಮನಾದ ಜಮೀನು ಖರೀದಿಸಿ ಮುಂದಿನ ಮಹಾಸಭೆಯೊಳಗೆ ನಿವೇಶನ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಮುರುಳಿ, ಹುಚ್ಚೇಗೌಡ, ಬಿ.ಎಸ್.ಜಯರಾಮು, ಎನ್.ಭಾಸ್ಕರ್, ಕೆ.ಬೆಟ್ಟಹಳ್ಳಿ ಶಿವಣ್ಣ, ಕಾರ್ಯದರ್ಶಿ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net