ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ನಿರ್ಮಿಸಲು ಎಚ್‌ ಡಿ ರೇವಣ್ಣ ಆಗ್ರಹ

ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ನಿರ್ಮಿಸಲು ಎಚ್‌ ಡಿ ರೇವಣ್ಣ ಆಗ್ರಹ
Published on

ಹಾಸನ: ನಗರದ ಹೊರವಲಯ ಬೂವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯು ಮೂಲಯೋಜನೆಗೆ ವಿರುದ್ಧವಾಗಿ ನಡೆಯುತ್ತಿದೆ. ಇದು ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿರುವ ಭೂಮಿಯನ್ನು ಕಬಳಿಸುವ ಹುನ್ನಾರವಾಗಿದ್ದು, ತಕ್ಷಣ ಕಾಮಗಾರಿ ನಿಲ್ಲಿಸಬೇಕು ಎಂದು ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.

‘ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಹೇಳಿದ್ದೇನೆ. ಈ ಸಂಬಂಧ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದು’ ಎಂದು ಗುರುವಾರ ನಗರದ ಸಂಸದರ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂಲ ಯೋಜನೆಯಂತೆ 540 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ, ವೈಮಾನಿಕ ತರಬೇತಿ ಕೇಂದ್ರ, ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲಿಂಗ್ ಕೇಂದ್ರ, ಗಾಲ್ಫ್ ಕೋರ್ಸ್, ಅತಿಥಿ ಗೃಹಗಳು, ಐಟಿ ಪಾರ್ಕ್ ಮತ್ತು ಇನ್‌ಲ್ಯಾಂಡ್ ಕಂಟೇನರ್ ಡಿಪೊ ನಿರ್ಮಿಸಿದ್ದರೆ 6500 ಜನರಿಗೆ ಉದ್ಯೋಗ ದೊರೆಯುತ್ತಿತ್ತು. ಆದರೆ ಮೂಲ ಯೋಜನೆಯನ್ನು ಬದಲಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಸುವ ಹುನ್ನಾರ ನಡೆದಿದೆ. ಹಿಂದಿನ ಜಿಲ್ಲಾಧಿಕಾರಿ ಮತ್ತು ಹಾಸನದ ಶಾಸಕ ಸೇರಿ ‘ವಿಮಾನ ನಿಲ್ದಾಣಕ್ಕೆ 540 ಎಕರೆ ಭೂಮಿ ಅಗತ್ಯವಿಲ್ಲ. ಅದರಲ್ಲಿ ಫಲವತ್ತಾದ ಜಮೀನು ಇದ್ದು, ರೈತರಿಗೆ ಹಿಂದಿರುಗಿಸಬಹುದು’ ಎಂಬುದಾಗಿ ಸರ್ಕಾರಕ್ಕೆ ಗುಟ್ಟಾಗಿ ವರದಿ ನೀಡಿದ್ದಾರೆ ಎಂದು ಆರೋಪಿಸಿದರು.

‘ನನ್ನ ಐಡಿಯಾಲಜಿಯಿಂದ ಹಾಸನಕ್ಕೆ ಪೂರ್ಣ ಪ್ರಮಾಣದ ವಿಮಾನ ನಿಲ್ದಾಣ ತಂದಿದ್ದೆ. ಆದರೆ ರೇವಣ್ಣ ಐಡಿಯಾಲಜಿ ಹಾಸನದಲ್ಲಿ ವರ್ಕ್ ಆಗಲ್ಲ ಎನ್ನುವವರು ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಲು ಹೊರಟಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಲೂಟಿ ನಡೆಯುತ್ತಿದೆ. ಇದು ಅವರ ಲೂಟಿ ಐಡಿಯಾಲಜಿ’ ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.

ಹಿಂದಿನ ಡಿಸಿ ವಿರುದ್ಧ ವಾಗ್ದಾಳಿ:
ಹಿಂದಿನ ಜಿಲ್ಲಾಧಿಕಾರಿ ಆರ್. ಗಿರೀಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇವಣ್ಣ, ‘ಅವನೊಬ್ಬ ಕಳ್ಳ. ಈಗ ಬೆಂಗಳೂರಿಗೆ ಹೋಗಿದ್ದಾನೆ. ನನ್ನ ಕೈಗೆ ಸಿಗದೆ ಎಲ್ಲೂ ಹೋಗಲ್ಲ, ಬಲಿ ಹಾಕ್ತೀನಿ’ ಎಂದು ಗುಡುಗಿದರು.

‘ಇಲ್ಲಿ 11 ಎಕರೆ ಜಾಗ ಹೊಡೆದ, ಅಲ್ಲಿ 250 ಎಕರೆ ಹೊಡೆಯಲು ಹೋಗಿದ್ದಾನೆ. ಆ ಖರಾಬ್ ಡಿಸಿಗೆ ಅವಾರ್ಡ್ ಕೊಡಬೇಕು. ಜಿಲ್ಲೆಗೆ ಅತಿ ಹೆಚ್ಚು ಸಿಎಲ್-7 ಲೈಸೆನ್ಸ್ ಕೊಟ್ಟಿದ್ದಾನೆ. ಒಂದು ಲೈಸನ್ಸ್‌ಗೆ 50 ಲಕ್ಷ ರೂ. ಲಂಚ ಪಡೆದಿದ್ದಾನೆ. ಇಂಥವನನ್ನು ಹಾಸನ ಜಿಲ್ಲಾಧಿಕಾರಿ ಮಾಡಿದವರಿಗೆ ಅವಾರ್ಡ್ ಕೊಡಬೇಕು. ಈಗ ಬೆಂಗಳೂರಿನ ಕೆಐಎಡಿಬಿಯಲ್ಲಿ ಫಲವತ್ತಾದ ಜಾಗದಲ್ಲಿ ಕೂರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವರೂಪ್ ಕೈ ಬಿಡುವುದಿಲ್ಲ
ಇತ್ತಿಚೆಗೆ ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯ ಗದ್ದಲದ ವಿಚಾರ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ’ನಾವು ಟಿಕೆಟ್ ಘೋಷಣೆ ಮಾಡಲು ಸಭೆ ಕರೆದಿರಲಿಲ್ಲ. ಸಭೆಗೆ ಕೆಲ ರೌಡಿಶೀಟರ್‌ಗಳು ಬಂದಿದ್ದರು. ಬಿಜೆಪಿ ಸರ್ಕಾರ ಬಂದಮೇಲೆ ಕೆಲವರನ್ನು ರೌಡಿಶೀಟ್‌ನಿಂದ ಕೈಬಿಟ್ಟಿದ್ದಾರೆ, ಕೆಲವರನ್ನು ಬೆಳೆಸುತ್ತಿದ್ದಾರೆ. ಅವರೇ ಬ್ಯಾನರ್ ಹರಿದು ಹಾಕಿದ್ದು’ ಎಂದು ದೂರಿದರು.

ಸಭೆಯಲ್ಲಿ ಗಲಾಟೆ ಮಾಡಿದ ಕೆಲ ರೌಡಿಶೀಟರ್‌ಗಳ ಬಗ್ಗೆ ಎಸ್ಪಿಗೆ ಹೇಳಿದ್ದೇನೆ. ಕೆಲವರು ಸ್ವರೂಪ್ ಹೆಸರು ಕೆಡಿಸಬೇಕೆಂದೇ ಹಾಗೆ ಮಾಡಿದ್ದಾರೆ. ಶೋಭಾಯಾತ್ರೆಗೆ 500 ಜನ ಪೊಲೀಸ್ ಹಾಕ್ತಾರೆ. ನಮ್ಮ ಸಭೆಗೆ ಒಬ್ಬ ಪೊಲೀಸ್ ಸಹ ಕಳಿಸಿಲ್ಲ. ಹಾಸನದಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂದು ಎಲ್ಲರೂ ಕುಳಿತುಕೊಂಡು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸ್ವರೂಪ್‌ನನ್ನು ಕೈ ಬಿಡೋದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net