ಮೂಲ ಜಾತಿಯ ಹೆಸರು ನಮೂದಿಸಿ ಸೌಲಭ್ಯ ಪಡೆಯಿರಿ: ದೇವರಾಜು ಮನವಿ

DHEVARAJ- press meet (1)
Published on

ಹಾಸನ: ಒಳ ಮೀಸಲಾತಿ ಜಾರಿಗಾಗಿ ನಿಖರ ದತ್ತಾಂಶ ಸಂಗ್ರಹಿಸಲು ಮನೆ ಮನೆ ಜನಗಣತಿಗೆ ಅಧಿಕಾರಿಗಳು ಬರುತ್ತಿದ್ದು, ಈ ವೇಳೆ ನಿಮ್ಮ ಮೂಲ ಜಾತಿಯ ಹೆಸರನ್ನು ದಾಖಲಿಸುವ ಮೂಲಕ ಸಂವಿಧಾನದ ಪ್ರಕಾರ ಮೀಸಲಾತಿ ಸೌಲಭ್ಯ ಪಡೆಯಿರಿ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು ಮನವಿ ಮಾಡಿದರು.

101 ಪರಿಶಿಷ್ಟ ಜಾತಿಯ ಬಂಧುಗಳಿಗೆ ಮನವಿ ಏನೆಂದರೆ, ಈಗಾಗಲೇ ತಮಗೆ ತಿಳಿದಿರುವಂತೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗಾಗಿ ನಿಖರ ದತ್ತಾಂಶ ಸಂಗ್ರಹಿಸಲು ನ್ಯಾ.ನಾಗಮೋಹನ ದಾಸ್ ಆಯೋಗದಿಂದ ಮೇ 5ರಿಂದ 17ರ ತನಕ ಜಾತಿ ಜನಗಣತಿ ಆರಂಭವಾಗಿದೆ. ಮೀಸಲಾತಿ ಸೌಲಭ್ಯ ಪಡೆಯಲು 101 ಪರಿಶಿಷ್ಟ ಜಾತಿಯವರೂ ಮೂಲ ಜಾತಿಗಳಾದ ಮಾದಿಗ, ಹೊಲೆಯ, ಸಮಗಾರ, ಡೋಹರ, ಮಚ್ಚೆಗಾರ, ಬೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ ವಿವರವನ್ನು ಸ್ಪಷ್ಟವಾಗಿ ತಿಳಿಸಬೇಕೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಆನ್‌ಲೈನ್‌ನಲ್ಲಿ ಜಾತಿ ವಿವರ ನೀಡಬಯಸುವವರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ನಿಮ್ಮ ಜಾತಿ ಪ್ರಮಾಣ ಪತ್ರದ ಆರ್‌ಡಿ ನಂಬರ್ ಅನ್ನು ಅಪ್‌ಲೋಡ್ ಮಾಡಬೇಕು. ಅತಿಮುಖ್ಯವಾಗಿ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ, ಹರಿಜನ ಎಂದು ಬರೆಸಬಾರದು ಎಂದ ಅವರು ಇದೇ ಕಾರಣಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಎಲ್ಲ ಹಂತದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಮೂಲ ಜಾತಿ ಬರೆಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಮಾದಿಗ ದಂಡೋರ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್ ಮಾತನಾಡಿ, ಜಾತಿ ಗಣತಿ ಮಾಡುತ್ತಿರು ಕೆಲವರು ಒಂದು ರೇಷನ್ ಕಾರ್ಡ್‌ನಿಂದ ಇಬ್ಬರಷ್ಟೇ ನೋಂದಣಿ ಆಗೋದು ಎನ್ನುತ್ತಿದ್ದಾರೆ. ಮತ್ತೊಂದೆಡೆ ಆಗತಾನೆ ಹುಟ್ಟಿದ ಮಗುವಿನ ಎಂಟ್ರಿ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಗಣತಿ ಮಾಡುತ್ತಿರುವವರಿಗೆ ಸರಿಯಾಗಿ ತರಬೇತಿ ನೀಡಬೇಕು, ತಪ್ಪು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಈ ಸಂಬಂಧ ಡಿಸಿ ಅವರು ಸಂಬಂಧಪಟ್ಟವರಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಬೂತ್ ಅಧ್ಯಕ್ಷ ವೆಂಕಟೇಶ್, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಶಶಿಕುಮಾರ್, ನಾಗರಾಜು, ಪ್ರಧಾನ ಕಾರ್ಯದರ್ಶಿ ಸತೀಶ್, ದೇವರಾಜು ತಿರುಪತಿಹಳ್ಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net