ಮೂರ್ತಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ

Submit proposal for idol installation
ವಿಜಯಪುರ ನಗರದ ಗಾಂಧಿ ವೃತ್ತಕ್ಕೆ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿದರು. ಟಿ. ಭೂಬಾಲನ್, ಎಚ್.ಡಿ. ಆನಂದಕುಮಾರ, ರಾಹುಲ ಶಿಂಧೆ, ಜಗದೀಶ ನಂದಿ, ರಾಜು ಮುಜುಂದಾರ, ಬದ್ರುದ್ದೀನ್ ಸೌದಾಗರ ಇತರರಿದ್ದರು.
Published on

ವಿಜಯಪುರ: ನಗರದಲ್ಲಿರುವ ಗಾಂಧಿ ವೃತ್ತ ನವೀಕರಣ ಮತ್ತು ನೂತನ ಭವ್ಯವಾದ ಪ್ರತಿಮೆ ಸ್ಥಾಪಿಸುವ ಕುರಿತು ವಿಸ್ತೃತವಾದ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆ ಸಲ್ಲಿಸಬೇಕು ಎಂದು ಬೃಹತ್-ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ನಗರದ ಗಾಂಧಿ ವೃತ್ತಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಈಗ ಇರುವ ಗಾಂಧಿ ವೃತ್ತ ಪುರಾತನವಾಗಿದೆ. ಈಗಾಗಲೇ ನಾವು ಭವ್ಯವಾದ ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ನಿರ್ಮಿಸಿದ್ದೇವೆ. ಈ ಹಿಂದೆ ನಾನು ಶಿವಾಜಿ ವೃತ್ತ ನಿರ್ಮಾಣಕ್ಕೆ ಮತ್ತು ಭವ್ಯವಾದ ಮೂರ್ತಿ ಪ್ರತಿಷ್ಠಾಪನೆಗೆ ಹೆಚ್ಚು ಅನುದಾನ ಕೊಡಿಸಿದ್ದೇನೆ. ಇಲ್ಲಿರುವ ಗಾಂಧಿ ಪ್ರತಿಮೆ ಚಿಕ್ಕದಾಗಿದ್ದು, ಅದನ್ನು ಭವ್ಯವಾದ ಮೂರ್ತಿ ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇದೆ. ಬೇರೆ ಬೇರೆ ಕಡೆಗಳಲ್ಲಿ ಇರುವ ಮಹಾತ್ಮ ಗಾಂಧಿ ಪ್ರತಿಮೆಗಳ ಮಾದರಿಯಲ್ಲಿ ಇಲ್ಲಿಯೂ ದೊಡ್ಡ ಪ್ರತಿಮೆಯಾಗಬೇಕು ಎಂಬ ಉದ್ದೇಶವಿದೆ. ಅಲ್ಲದೆ, ಇಲ್ಲಿ ಫ್ಲೈ ಓವರ್ ಮಾಡುವಾಗ ಈ ಪ್ರತಿಮಯೆನ್ನು ಇಲ್ಲಿಯೇ ಇಡಬೇಕಾ ಅಥವಾ ಬೇರೆಡೆ ಸ್ಥಳಾಂತರ ಮಾಡಬೇಕಾ? ಎಂಬುದರ ಕುರಿತು ಇನ್ನೂ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಿದೆ. ಈ ರಸ್ತೆಯಲ್ಲಿನ ಎಲ್ಲ ವೃತ್ತಗಳು ಮಧ್ಯದಲ್ಲಿಯೇ ಇರಬೇಕಾ ಅಥವಾ ಇವುಗಳ ಪಕ್ಕದಲ್ಲಿ ಫ್ಲೈ ಓವರ್ ನಿರ್ಮಾಣವಾಗಬೇಕು ಎಂಬುದರ ಬಗ್ಗೆಯೂ ನಿರ್ಧರಿಸಬೇಕಿದೆ. ಈ ಕುರಿತು ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಕುರಿತು ಎರಡು ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಕೊಡುವಂತೆ ನೀಲನಕ್ಷೆ ತಯಾರಿಸುತ್ತಿರುವ ಜಲವಾಹಿನಿ ಮ್ಯಾನೇಜ್‌ಮೆಂಟ್ ಪ್ರಧಾನ ವ್ಯವಸ್ಥಾಪಕ ಜಗದೀಶ ನಂದಿ ಮತ್ತು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದೇನೆ. ಶಿವಾಜಿ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಫ್ಲೈಓವರ್ ನಿರ್ಮಿಸುವ ಯೋಚನೆ ಇದೆ. ಈ ಯೋಜನೆಗೆ ಹೊಸದಾಗಿ ಹಣಕಾಸು ಹೊಂದಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ ಶಿಂಧೆ, ಜಲವಾಹಿನಿ ಮ್ಯಾನೇಜ್‌ಮೆಂಟ್ ಎಂಡಿ ಜಗದೀಶ ನಂದಿ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜು ಮುಜುಂದಾರ, ಅಸಿಸ್ಟಂಟ್ ಇಂಜಿನಿಯರ್ ಎಂ.ಎಂ. ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net