

ಹನೂರು: ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹೆಚ್ಚಾಗಿದ್ದು, ಶಾಂತಿಯುತ ಗಣೇಶೋತ್ಸವ ಹಾಗೂ ಮೂರ್ತಿ ವಿಸರ್ಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ಮಾಹಿತಿ ನೀಡಿದರು.
ಗಣೇಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಯೋಜಿಸಿದ್ದ ಪಥ ಸಂಚಲನದ ವೇಳೆ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 1,124 ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ವರ್ಷ ಇದರ ಸಂಖ್ಯೆ 1,196ಕ್ಕೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ವರ್ಷದಂತೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಇಲಾಖೆಯಿಂದ ಮುತುವರ್ಜಿ ವಹಿಸಲಾಗಿದೆ. ಈ ದೆಸೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮಡಿಸಲಾಗುತ್ತಿದೆ. ಈಗಾಗಲೇ ಚಾ.ನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲಿ ಈ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಹನೂರಿನ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಗಿದೆ. ಈ ಕಾರ್ಯದಲ್ಲಿ 200 ಪೊಲೀಸ್ ಅಧಿಕಾರಿ, ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿ ಹಾಗೂ ಕಮಾಂಡೊ ಪಡೆ ಭಾಗಿಯಾಗಿದೆ. ಸಾರ್ವಜನಿಕರು ಗಣೇಶ ಮೂರ್ತಿ ವಿಸರ್ಜನೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಹನೂರು ಭಾಗದಲ್ಲಿ ಹೆಚ್ಚು ಅಪಘಾತವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಭಾಗದಲ್ಲಿ ಇದೀಗ ರಸ್ತೆ ಉತ್ತಮವಾಗಿದೆ. ಹಾಗಾಗಿ ಸವಾರರು ವೇಗದ ಮಿತಿ ಮೀರಿ ವಾಹನವನ್ನು ಚಲಾಯಿಸುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಪ್ರತಿ ಪೊಲೀಸ್ ಠಾಣೆಯಲ್ಲೂ ಸಂಚಾರ ಸುರಕ್ಷತಾ ನಿಯಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ವಾಹನ ಸವಾರರು ಜೀವ ರಕ್ಷಣೆಯ ಹಿತದೃಷ್ಟಿಯಿಂದ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ಅಪಘಾತವಾಗುವುದನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯದ ಭವನ ಆವರಣದಿಂದ ಹೊರಟ ಪಥ ಸಂಚಲನ ಲೊಕ್ಕನಹಳ್ಳಿ ಮುಖ್ಯರಸ್ತೆ, ಸೊಪ್ಪಿನಕೇರಿ ಬೀದಿ, ಮೈಸೂರು ಮಾರಮ್ಮ, ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ, ಬಂಡಳ್ಳಿ ರಸ್ತೆ, ಮಲೆಮಹದೇಶ್ವರ ಬೆಟ್ಟ ಮುಖ್ಯರಸ್ತೆಯಲ್ಲಿ ಸಾಗಿ ಅಂತ್ಯಗೊಂಡಿತು.
ಡಿವೈಎಸ್ಪಿಗಳಾದ ಧರ್ಮೇಂದ್ರ, ಲಕ್ಷ್ಮಯ್ಯ, ಸೋಮಣ್ಣ, ಇನ್‌ಸ್ಪೆಕ್ಟರ್ ಸಿ.ಆನಂದಮೂರ್ತಿ ಹಾಗೂ ಜಿಲ್ಲೆಯ ವಿವಿಧ ಠಾಣೆಯ ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಇದ್ದರು.