

ಹಾಸನ: ಸಾಮಾನ್ಯ ಜನರಿಗೆ ಮೂರ್ಛೆ ರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಿ ಸರಿಯಾದ ತಿಳಿವಳಿಕೆ ನೀಡುವುದು ಮತ್ತು ಮೂರ್ಛೆ ರೋಗದ ವ್ಯಕ್ತಿಯು ಸಾಮಾನ್ಯರಂತೆ ಜೀವನ ನಡೆಸಲು ಸಹಾಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮ ಹೇಳಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಅಪಸ್ಮಾರ ದಿನ-2025ಕ್ಕೆ ಸಂಬಂಧಿಸಿದ ಆರೋಗ್ಯ ಶಿಕ್ಷಣ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಡಿಆರ್‌ಡಿಎ ಶಾಖೆಯ ಯೋಜನಾ ನಿರ್ದೇಶಕ ವೈ.ಎನ್. ಚಂದ್ರಮೌಳಿ ಮಾತನಾಡಿ, ಮೂರ್ಛೆ ರೋಗದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸಕಾಲದಲ್ಲಿ ವೈದ್ಯರ ನೆರವು ಮತ್ತು ಚಿಕಿತ್ಸೆ ಪಡೆದಲ್ಲಿ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಡಿಆರ್‌ಡಿಎ ಶಾಖೆಯ ಸಹಾಯಕ ಯೋಜನಾಧಿಕಾರಿ ಎ.ಎಸ್. ಸುನೀತಾ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರ ಸಭೆಗಳಲ್ಲಿ ಮೂರ್ಛೆ ರೋಗದ ಬಗ್ಗೆ ಮಾಹಿತಿಯನ್ನು ನೀಡಿ ಈ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಪಿ ಆರಾಧ್ಯ ಮಾತನಾಡಿ, 2025ರ ಘೋಷವಾಕ್ಯವಾದ ‘ರೋಗಗ್ರಸ್ತತೆಯನ್ನು ಮೀರಿ ಅಪಸ್ಮಾರ ಅರಿವಿನೊಂದಿಗೆ ಜೀವನವನ್ನು ಸಶಕ್ತಗೊಳಿಸುವುದು’. ಈ ಕಾಯಿಲೆಗೆ ಬಹು ಮುಖ್ಯವಾಗಿ ಅರಿವಿನ ಅವಶ್ಯಕತೆ ಇದ್ದು ಇವತ್ತಿಗೂ ಸಹ ಮೂರ್ಛೆ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಕಬ್ಬಿಣದ ಕೀಲಿಯನ್ನೋ ಅಥವಾ ಕಬ್ಬಿಣದ ಸಲಾಕೆ ಕೊಡುವ ಪ್ರವೃತ್ತಿಯು ಕಾಣಸಿಗುತ್ತದೆ. ಈ ತರಹದ ಮೂಢನಂಬಿಕೆಗಳನ್ನು ಹೋಗಲಾಡಿಸಿ ರೋಗದ ಬಗ್ಗೆ ಹಾಗೂ ಅದಕ್ಕೆ ಲಭ್ಯವಿರುವ ಚಿಕಿತ್ಸೆಯ ಬಗ್ಗೆ ವಿವರಿಸಿದರು.
ಹಾಸನ ವೈದ್ಯಕೀಯ ವಿದ್ಯಾಲಯದಲ್ಲಿ ಮೊದಲನೆ ಮಹಡಿ ಕೊಠಡಿ ಸಂಖ್ಯೆ 13ಆ ಇಲ್ಲಿ ಬ್ರೈನ್ ಹೇಲ್ತ್ ಕ್ಲಿನಿಕ್ ಸ್ಥಾಪಿಸಿದ್ದು, ಇಲ್ಲಿ ವಿಶೇಷವಾಗಿ ಪಾರ್ಶ್ವವಾಯು, ಮೂರ್ಛೆ ರೋಗ, ತಲೆ ನೋವು ಮತ್ತು ಮರೆವಿನ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ನರ ಶಸ್ತ್ರ ಚಿಕಿತ್ಸಕರು ಲಭ್ಯವಿತ್ತಾರೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ವಿಭಾಗದಲ್ಲಿ ಫಿಜಿಯೋಥೆರಫಿ, ಸ್ಪೀಚ್ ಥೆರಫಿ, ಮತ್ತು ಸೈಕೋಥೆರಫಿ ಇಂತಹ ಸೌಲಭ್ಯಗಳು ಕೂಡ ಉಚಿತವಾಗಿ ಲಭ್ಯವಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಹಾಸನದ ಸಿಬ್ಬಂದಿ ವರ್ಗದವರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ 50ಕ್ಕೂ ಹೆಚ್ಚು ಸಿಬ್ಬಂದಿ ಉಪಸ್ಥಿತರಿದ್ದರು.