

ಸಕಲೇಶಪುರ: ಸ್ಥಳೀಯ ಮೂರ್ಕಣ್ಣು ಗುಡ್ಡ ವ್ಯಾಪ್ತಿಯ ಜನರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ನೇತೃತ್ವದಲ್ಲಿ ಮೂರ್ಕಣ್ ಗುಡ್ಡ ವ್ಯಾಪ್ತಿಯ 8 ಗ್ರಾಮಗಳ ಸಂತ್ರಸ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ತಾಲೂಕಿನ ಅಗನಿ ಗ್ರಾಮದಲ್ಲಿ ಮೂರ್ಕಣ್ ಗುಡ್ಡ ವ್ಯಾಪ್ತಿಯ 8 ಗ್ರಾಮಗಳ ಸಂತ್ರಸ್ತರು ಸೆಕ್ಷನ್ 4 ಸಮಸ್ಯೆ ಎದುರಿಸುತ್ತಿದ್ದಾರೆ. 1920ರಲ್ಲಿ ಅಂದಿನ ಮೈಸೂರು ಸರ್ಕಾರ 8 ಗ್ರಾಮಗಳ 7938 ಎಕರೆಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ಸೆಕ್ಷನ್ 4 ಜಾರಿಗೊಳಿಸಿತ್ತು. ಸರ್ಕಾರದ ಈ ನಡೆಯನ್ನು ವಿರೋಧಿಸಿ ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ 1924 ರಲ್ಲಿ ಈ ವ್ಯಾಪ್ತಿಯನ್ನು ಸೆಕ್ಷನ್ 4 ರಿಂದ ಕೈಬಿಟ್ಟಿದೆ. ಆದರೆ ಶತಮಾನ ಕಳೆದ ನಂತರ ಈ ಯೋಜನೆಗೆ ಮರುಜೀವ ನೀಡಿರುವ ಅರಣ್ಯ ಇಲಾಖೆ, ಈ ಭಾಗವನ್ನು ಅಭಯಾರಣ್ಯ ಎಂದು ಘೋಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಆದರೆ ಶತಮಾನದ ನಂತರ ಈ ಯೋಜನೆ ಜಾರಿಗೆ ಮುಂದಾಗಿರುವ ಅರಣ್ಯ ಇಲಾಖೆ ನಡೆ ಸರಿಯಲ್ಲ. ಶತಮಾನದ ಅಂತರದಲ್ಲಿ ಹಲವು ತಲೆಮಾರುಗಳೇ ಕಳೆದಿದ್ದು ಅಂದು ಹಾಗೂ ಇಂದಿನ ಜನಾಂಗದ ನಡುವೆ ಹಲವು ಬದಲಾವಣೆ ಇದೆ. ಆದರೂ ನಿತ್ಯ ಈ ಭಾಗದ ರೈತರಿಗೆ ಅರಣ್ಯ ಇಲಾಖೆ ಮಾನಸಿಕ ಹಿಂಸೆ ನೀಡುತ್ತಿದೆ. ತೋಟ ಬೆಳೆಯುವಂತಿಲ್ಲ, ರಸ್ತೆ ನಿರ್ಮಿಸುವಂತಿಲ್ಲ, ಮನೆ ಕಟ್ಟುವಂತಿಲ್ಲ ಎಂಬೆಲ್ಲ ಕಟ್ಟುಪಾಡಿನಿಂದಾಗಿ ಈ ಭಾಗದ ಜನರಿಗೆ ಜೀವನವೇ ಬೇಸರ ಮೂಡಿಸಿದೆ ಎಂದು ದೂರಿದರು.
ಈ ಭಾಗದ 8 ಗ್ರಾಮಗಳ ವ್ಯಾಪ್ತಿಯಲ್ಲಿ 1920 ರಿಂದಲೂ ಹಂತಹಂತವಾಗಿ ರೈತರಿಗೆ ಸರ್ಕಾರಗಳು ಭೂಮಿ ಮಂಜೂರು ಮಾಡಿದೆ. ಫಾರ್ಮ್ 50, 53ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. 94ಸಿಯಡಿ ಹಲವು ಬಡವರಿಗೆ ಮನೆ ನೀಡಲಾಗಿದೆ. ಮುಖ್ಯವಾಗಿ ಮೂರ್ಕಣ್ ಗುಡ್ಡ ವ್ಯಾಪ್ತಿಯಲ್ಲೇ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಜಾರಿಗೊಂಡಿದೆ. ಈ ಭಾಗದಲ್ಲಿ ಹಲವು ಬೃಹತ್ ಕಂಪನಿಗಳು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿವೆ. ಆದರೆ ಇವರ ತಂಟೆಗೆ ಹೋಗದ ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ, ಮಧ್ಯಮ ರೈತರ ಜಮೀನು ಕಬಳಿಸಲು ಇಲ್ಲದ ಕಾರಣ ನೀಡುತ್ತಿದೆ. ವಿವಿಧ ಇಲಾಖೆಗಳಿಗೆ ಜಮೀನು ಮಂಜೂರು ಮಾಡಿರುವ ಬಗ್ಗೆ ಅರಣ್ಯ ಇಲಾಖೆ ಸಂಬಂಧಿತ ಇಲಾಖೆಗಳೊಂದಿಗೆ ಚರ್ಚೆ ನಡೆಸಬೇಕು, ಇದನ್ನು ಹೊರತುಪಡಿಸಿ ತಮ್ಮಷ್ಟಕ್ಕೆ ಇರುವ ರೈತರಿಗೆ ನೋಟಿಸ್ ನೀಡಿ ನೆಮ್ಮದಿ ಹಾಳು ಮಾಡಲಾಗುತ್ತಿದೆ ಎಂದರು.
ಅಭಯಾರಣ್ಯ ಎಂದು ಘೋಷಿಸುವ ಮುನ್ನ ಸೆಕ್ಷನ್ 1 ರಿಂದ ಸೆಕ್ಷನ್ 17 ರವರೆಗೆ ಹಲವು ನಿಯಮಗಳನ್ನು ಜಾರಿಗೊಳಿಸಬೇಕು. ಆದರೆ, ಈ ಯಾವುದೇ ನಿಯಮಗಳು ಪಾಲನೆಯಾಗದೆ ಸ್ಥಳೀಯರನ್ನು ಇಲ್ಲಿಂದ ಒಕ್ಕಲೆಬ್ಬಿಸಲು ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಯಾವುದೇ ಕಾರಣಕ್ಕೂ ಇಲ್ಲಿನ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವುದಿಲ್ಲ. ಅರಣ್ಯ ಇಲಾಖೆ ಸೆಕ್ಷನ್ ನಾಲ್ಕರ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡಿದರೆ ಯಾವುದೇ ಮಟ್ಟದ ಹೋರಾಟಕ್ಕೂ ನಾವು ಸಿದ್ಧ ಎಂದು ಎಚ್ಚರಿಸಿದರು.
ಅಗನಿ ಗ್ರಾಮದಿಂದ ಜಾಥಾ ಮೂಲಕ ಪಟ್ಟಣಕ್ಕೆ ಆಗಮಿಸಿದ ಪ್ರತಿಭಟನಕಾರರು, ಶಾಸಕ ಸಿಮೆಂಟ್ ಮಂಜು ಹಾಗೂ ತಹಸೀಲ್ದಾರ್ ಸುಪ್ರೀತಾ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮೂರ್ಕಣ್ ಗುಡ್ಡವ್ಯಾಪ್ತಿಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ಸ್ಥಳೀಯರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಎಸಗುತ್ತಿರುವುದು ಬೇಸರದ ವಿಚಾರ. ಕಳೆದ ಕೆಲವು ದಿನಗಳ ಹಿಂದೆ ಸಂತ್ರಸ್ತರ ಸಭೆ ನಡೆಸಿ ಅಹವಾಲುಗಳನ್ನು ಕೇಳಲಾಗಿದ್ದು ಸಂತ್ರಸ್ತರ ಪರವಾಗಿ ಯಾವುದೇ ಹೋರಾಟಕ್ಕೂ ಸಿದ್ಧ. ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ನಡೆಸಲಿದ್ದೇನೆ ಎಂದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಹೋರಾಟಗಾರ ಪೂರ್ಣೇಶ್ ಹಟ್ಟಿಬೆಟ್ಟ, ಸ್ಟೋನ್‌ವ್ಯಾಲಿ ಸುಭಾಷ್, ಓಂಕುಮಾರ್, ಮಹೇಶ್, ಅರವಿಂದ್, ಪೂರ್ಣ, ಜಯಶ್ರೀ ಸೇರಿದಂತೆ ಹಲವರು ಭಾಗವಹಿಸಿದ್ದರು.