ಮೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ

DIP (4)--03
Published on

ಚಿತ್ರದುರ್ಗ: ಅಮೃತ್ ಯೋಜನೆಯಡಿ ಚಿತ್ರದುರ್ಗ, ಚಳ್ಳಕೆರೆ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ ಕಾಮಗಾರಿ ಸ್ಥಳ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ರೈಲು ನಿಲ್ದಾಣದ ಅಭಿವೃದ್ಧಿಗೆ ಅಂದಾಜು 16 ಕೋಟಿ ರೂ. ವೆಚ್ಚದೊಂದಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಯೋಜನೆ ಕಾಮಗಾರಿಗಳನ್ನು ಹೊರತುಪಡಿಸಿ, ಅಮೃತ್ ಯೋಜನೆಯಡಿ ಮೂಲ ಸೌಕರ್ಯ ಹಾಗೂ ಆಡಳಿತ ಕಚೇರಿ ನಿರ್ಮಿಸಲಾಗುತ್ತಿದೆ. 2.36 ಕೋಟಿ ರೂ. ವೆಚ್ಚದಲ್ಲಿ ಚಳ್ಳಕೆರೆ ರೈಲ್ವೆ ಫ್ಲಾಟ್‌ಫಾರಂ ಅಭಿವೃದ್ಧಿ ಪಡಿಸಲಾಗುತ್ತಿದೆ. ಶೀಘ್ರದಲ್ಲೇ ಅಮೃತ್ ಯೋಜನೆಗೆ ಪ್ರಧಾನ ಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ 1,900 ಕೋಟಿ ರೂ. ಮಂಜೂರು ಮಾಡಿದೆ. ದಾವಣಗೆರೆ-ಚಿತ್ರದುರ್ಗ-ಹಿರಿಯೂರು ಭಾಗದಲ್ಲಿ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ ಶೇ.82ನ್ನು ಸ್ವಾಧೀನ ಪಡಿಸಿಕೊಂಡು ರೈಲ್ವೇ ಇಲಾಖೆಗೆ ಹಸ್ತಾಂತರಿಸಲಾಗಿದೆ. ಯೋಜನೆ ಟೆಂಡರ್‌ಗೆ ಶೇ.90 ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು ಎಂದರು.
ಹಳೆಯ ಪಿ.ಬಿ.ರೋಡ್ ರೈಲ್ವೇ ಗೇಟ್ ಬಳಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಎನ್‌ಒಸಿ ನೀಡುವಂತೆ ಡಿಸಿಗೆ ಸೂಚಿಸಿದರು.
ರೈಲ್ವೆ ಇಲಾಖೆ ಉಪ ವ್ಯವಸ್ಥಾಪಕ ರಾಮಸುಬ್ಬಯ್ಯ, ಡಿವಿಜಿನಲ್ ಕಮರ್ಷಿಯಲ್ ಮ್ಯಾನೇಜರ್ ಲೋಹಿತಾಶ್ವ, ಬ್ರಿಡ್ಜ್ ಡೆಪ್ಯೂಟಿ ಇಂಜಿನಿಯರ್ ಉನ್ನೀಕೃಷ್ಣನ್, ಸಹಾಯಕ ವಿಭಾಗೀಯ ಇಂಜಿನಿಯರ್ ನಿತ್ಯಾನಂದಸ್ವಾಮಿ, ಟ್ರಾಫಿಕ್ ಇನ್ಸ್‌ಪೆಕ್ಟರ್ ಬಿ.ಹನುಮಂತು, ನಿಲ್ದಾಣ ಅಧೀಕ್ಷಕ ಇ.ಮಂಜುನಾಥ್, ಆರ್‌ಪಿಎಫ್ ಎಸ್‌ಐ ಜಯಣ್ಣ, ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಸೇರಿ ಬಿಜೆಪಿಯ ಪ್ರಮುಖರು ಇದ್ದರು.

*ಓವರ್ ಬ್ರಿಡ್ಸ್ ನಿರ್ಮಾಣ
ಚಿತ್ರದುರ್ಗ ರೈಲ್ವೆ ನಿಲ್ದಾಣದ ಒಂದೇ ಪ್ಲಾಟ್‌ಫಾರಂನಲ್ಲಿ ಮಾತ್ರ ಪ್ರಯಾಣಿಕ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ. 2ನೇ ಫ್ಲಾಟ್ ಫಾರಂ ಇಲ್ಲದ ಕಾರಣ ಓವರ್ ಬ್ರಿಡ್ಜ್ ನಿರ್ಮಿಸಿಲ್ಲ. ಮೂರನೇ ರೈಲ್ವೇ ಹಳಿಯಲ್ಲಿ ಗೂಡ್ಸ್ ರೈಲುಗಳ ಓಡಾಟವಿದೆ. ನೇರ ರೈಲುಮಾರ್ಗ ಯೋಜನೆ ಪೂರ್ಣವಾದ ಬಳಿಕ ಹೆಚ್ಚುವರಿ ಫ್ಲಾಟ್‌ಫಾರಂಗಳನ್ನು ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಓವರ್ ಬ್ರಿಡ್ಜ್ ನಿರ್ಮಾಣವಾಗಲಿವೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net