ಮೂರು ಪ್ರತ್ಯೇಕ ಅಪಘಾತ; ಮೂವರು ಮೃತ, ಐವರಿಗೆ ಗಾಯ

accident
Published on

ಹಾಸನ : ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟು ಐದು ಮಂದಿ ಗಾಯಗೊಂಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ಅಣತಿಹಳ್ಳಿ ಗ್ರಾಮದ ಗಂಗರಾಜು(42), ಅರಸೀಕೆರೆ ತಾಲೂಕು ಜಾವಗಲ್ ಗ್ರಾಮದ ಎಚ್.ಜೆ.ಸಂತೋಷ್(40), ಬೇಲೂರು ತಾಲೂಕು ಹಗರೆ ಗ್ರಾಮದ ಎಚ್.ಎಸ್. ಗೌತಮ್ (23) ಮೃತ ದುರ್ದೈವಿಗಳು.
ಚನ್ನರಾಯಪಟ್ಟಣ ತಾಲೂಕಿನ ದಿಡಗ ಅಂಡರ್ ಪಾಸ್ ಬಳಿ ಮಂಗಳವಾರ ರಾತ್ರಿ ಗಂಗರಾಜು ಮತ್ತು ರಾಜೇಶ್, ಆಶಾರಾಣಿ, ಭವ್ಯಾ, ಸಂಜಯ್ ದೀಪ್ತಿ ಅವರು ಸಂಬಂಧಿಕರ ಅಂತಿಮ ದರ್ಶನ ಮುಗಿಸಿಕೊಂಡು ಒಂದೇ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಏಕಾಏಕಿ ದಿಡಗ ಅಂಡರ್ ಪಾಸ್ ಬಳಿ ಬ್ರೇಕ್ ಹಾಕಿದ ಪರಿಣಾಮ ಕಾರು ಹಿಂದಿನಿಂದ ಬಂದು ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿ ಚಾಲಕ ಗಂಗರಾಜು ಸೇರಿ ಐವರಿಗೂ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗಿನ ಜಾವ ಗಂಗರಾಜು ಮೃತಪಟ್ಟಿದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅರಸೀಕೆರೆ ತಾಲೂಕು ಜಾವಗಲ್ ಗ್ರಾಮದ ಎಚ್.ಜೆ.ಸಂತೋಷ್ ಎಂಬುವರು ಏ.3ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಹಳೇಬೀಡಿಗೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್ ಊರಿಗೆ ಹೋಗಲು ಆಟೋ ಏರಿದ್ದರು. ಆಟೋ ಚಾಲಕ ಮಧು ಎಂಬಾತ ಜಾವಗಲ್ ರಸ್ತೆಯ ಮಾಯಗೊಂಡನಹಳ್ಳಿ-ಹೊಸೂರು ಗ್ರಾಮದ ಮಧ್ಯೆ ಅತಿವೇಗವಾಗಿ ಆಟೋ ಚಲಾಯಿಸಿ ರಸ್ತೆ ಬದಿಗೆ ಆಟೋ ಬೀಳಿಸಿದ್ದಾನೆ. ಗಂಭೀರ ಗಾಯಗೊಂಡ ಸಂತೋಷ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ ಬೇಲೂರು ತಾಲೂಕು ಹಗರೆ ಗ್ರಾಮದ ಎಚ್.ಎಸ್. ಗೌತಮ್ (23) ಮೋರ್ ತರಕಾರಿ ಅಂಗಡಿ ಮುಂಭಾಗ ಎಡ ಬದಿಯಲ್ಲಿ ನಡೆದು ಹೋಗುತ್ತಿದ್ದರು. ಹಾಸನ ಕಡೆಯಿಂದ ಬಂದ ಲಾರಿ ಚಾಲಕ ಅತಿವೇಗವಾಗಿ ಬಂದು ಗೌತಮ್‌ಗೆ ಗುದ್ದಿ ನಂತರ ನಿಲ್ಲಿಸದೇ ಹೋಗಿದ್ದಾನೆ. ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಪೆಟ್ಟಾಗಿ ಗೌತಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net