ಮೂರು ದಿನದಲ್ಲಿ ನೀರು ಹರಿಸುವಿಕೆ ಆರಂಭ

Draining of water will start in three days
ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳದ ಬಳಿ ಕೆಬಿಜೆಎನ್‌ಎಲ್ ಕಾಲುವೆ ಒಡೆದ ಸ್ಥಳಕ್ಕೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಇ ಆರ್.ಎಲ್. ಹಳ್ಳೂರ, ಎಇ ಸುರೇಶ ತಳವಾರ ಇದ್ದರು.
Published on

ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಬಳಿ ಬುಧವಾರ ಒಡೆದಿದ್ದ ಕೆಬಿಜೆಎನ್‌ಎಲ್ ಕಾಲುವೆಯನ್ನು ಅಧಿಕಾರಿಗಳು ದುರಸ್ತಿ ಮಾಡಿಸಿದ್ದಾರೆ. ಶುಕ್ರವಾರ ಸ್ಥಳಕ್ಕೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ಕಾಲುವೆ ವ್ಯಾಪ್ತಿಯಲ್ಲಿ ಹೊಲಗಳಿಗೆ ನೀರುಹರಿಸಿಕೊಳ್ಳಲು ರೈತರು ಕಾಲುವೆಗೆ ಧಕ್ಕೆ ಆಗದಂತೆ ನೀರು ಹಾಯಿಸಿಕೊಳ್ಳಬೇಕು. ಕಾಲುವೆಯೊಳಗೆ ಪೈಪ್ ಹಾಯಿಸುವುದರಿಂದ ಒತ್ತಡ ತಾಳದೆ ಕಾಲುವೆಗಳು ಒಡೆದು ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿರುತ್ತವೆ. ಇದಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆಬಿಜೆಎನ್‌ಎಲ್ ಇಇ ಆರ್.ಎಲ್. ಹಳ್ಳೂರ ಮಾತನಾಡಿ, ಒಡೆದಿರುವ ಕಾಲುವೆಯನ್ನು ದುರಸ್ತಿ ಮಾಡಲಾಗಿದೆ. ಮೂರು ದಿನಗಳಲ್ಲಿ ಕಾಲುವೆಯಲ್ಲಿ ನಿಧಾನಗತಿಯಲ್ಲಿ ನೀರು ಹರಿಸುವಿಕೆ ಕಾರ್ಯ ಆರಂಭಿಸಲಾಗುವುದು. ರೈತರು ಮೋಟರ್‌ಗಳನ್ನು ಕಾಲುವೆ ದಡದಲ್ಲಿಟ್ಟು ಹೊಲಗಳಿಗೆ ಹಾಯಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕಾಲುವೆಯನ್ನು ಕೊರೆಯುವುದು, ಅಗೆಯುವುದು ಮಾಡುವುದರಿಂದ ಈ ರೀತಿ ಘಟನೆಗಳು ಸಂಭವಿಸುತ್ತವೆ. ಕಾಲುವೆ ನವೀಕರಣ ಕಾರ್ಯ ಇನ್ನು ವಿಳಂಬವಾಗಲಿದೆ ಎಂದು ಮಾಹಿತಿ ನೀಡಿದರು. ಎಇ ಸುರೇಶ ತಳವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net