ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ದೇವರಾಜೇಗೌಡ

ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ದೇವರಾಜೇಗೌಡ
Published on

ಹಾಸನ: ಅತ್ಯಾಚಾರ ಪ್ರಕರಣದ ವಿಚಾರವಾಗಿ ಬಂಧನಕ್ಕೆ ಒಳಗಾಗಿರುವ ವಕೀಲ ಹಾಗೂ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರನ್ನು ಪೊಲೀಸರು ಮಂಗಳವಾರ ಬೆಳಗ್ಗೆ ಹಾಸನ ಜಿಲ್ಲಾ ಬಂಧೀಖಾನೆಯಿಂದ ಕರೆದೊಯ್ದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್ ನೇತೃತ್ವದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು.
ಅತ್ಯಾಚಾರ ಪ್ರಕರಣದ ಮೇಲೆ ದೇವರಾಜೇಗೌಡ ಅವರನ್ನು ಮೇ 11ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮಿಪ ದೇವರಾಜೇಗೌಡ ಅವರನ್ನು ಬಂಧನ ಮಾಡಲಾಗಿತ್ತು. ಮೇ 12ರಂದು ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆದೇಶದ ಮೇರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಮೇ 13ರ ಸೋಮವಾರ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ದೇವರಾಜೇಗೌಡ ಅವರನ್ನು ಒಪ್ಪಿಸುವಂತೆ ಪೊಲೀಸರು ನ್ಯಾಯಾಲಯದ ಮುಂದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದೆ. ಮಂಗಳವಾರ ಬೆಳಗ್ಗೆ ಹೊಳೆನರಸೀಪುರ ಡಿವೈಎಸ್‌ಪಿ ಅಶೋಕ್ ಅವರು ಜಿಲ್ಲಾ ಕಾರಾಗೃಹದಿಂದ ದೇವರಾಜೇಗೌಡ ಅವರನ್ನು ಕರೆದೊಯ್ದರು. ಪೊಲೀಸರು ಕರೆದುಕೊಂಡು ಹೋಗುವಾಗ ದೇವರಾಜೇಗೌಡ ‘ಅವರ ಪ್ರೊಸಿಜರ್ ಅವರು ಮಾಡ್ತಾರೆ ಬಿಡ್ರಪ್ಪ,’ ಎಂದು ಹೇಳಿ ಪೊಲೀಸ್ ವಾಹನ ಹತ್ತಿ ಕುಳಿತರು.
ಬಳಿಕ ದೇವರಾಜೇಗೌಡ ಅವರನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆ ತರಲಾಯಿತು. ಅಲ್ಲಿ ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್, ಎಸ್‌ಪಿ ಮೊಹಮ್ಮದ್ ಸಜಿತಾ ಸೇರಿದಂತೆ ಹಲವು ಅಧಿಕಾರಿಗಳ ವಿಚಾರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net