

ಮುದ್ದೇಬಿಹಾಳ: ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧದ ಹೋರಾಟ ತೀವ್ರಗೊಳಿಸುವುದಕ್ಕೆ ನಿರ್ಧರಿಸಿದ್ದೇವೆ ಎಂದು ತಾಲೂಕಿನ ಢವಳಗಿ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಸಿದರೆಡ್ಡಿ ಹೇಳಿದರು.
ಬಸವ ಬಾಲ ಭಾರತಿ ಶಾಲೆಯ ಶಿಕ್ಷಕರುಗಳ ಹತ್ತು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ ಮೂರನೇ ದಿನ ಪೂರೈದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿಕ್ಷಕರ ವೇತನ ಪಾವತಿಸುವ ಸಕ್ಷಮ ಪ್ರಾಧಿಕಾರ ಬಿಇಓ ಆಗಿದ್ದು ಪ್ರಭಾರಿ ಹುದ್ದೆಯಲ್ಲಿರುವ ಯು.ಬಿ.ಧರಿಕಾರ ಅವರು ಢವಳಗಿ ಶಾಲೆಯ ಶಿಕ್ಷಕರ ವೇತನ ಪಾವತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳದೇ ಮೌನವಾಗಿದ್ದಾರೆ.ನಮಗೆ ಇನ್ನೂ ಕಾಲಾವಕಾಶ ಬೇಕು.ಬಿಜಿ ಇದ್ದೇವೆ.ಪರಿಶೀಲನೆ ನಡೆಸುವುದಾಗಿಯೇ ಹೇಳುತ್ತಿದ್ದಾರೆ.
ಬಿಇಓ ಅವರ ಡಿಎಸ್‌ಇ ಕೀ ಬಂದಿದ್ದರೂ ವೇತನ ಪಾವತಿಸುವುದಕ್ಕೆ ಹಿಂದೇಟು ಹಾಕುತ್ತಿರುವುದರ ಹಿಂದಿನ ಮರ್ಮವೇನು ? ಎಂಬುದು ಅರ್ಥವಾಗುತ್ತಿಲ್ಲ.ಡಿಡಿಪಿಐ ಅವರು ವೇತನ ಪಾವತಿಸುವ ಜವಾಬ್ದಾರಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಯದ್ದಾಗಿದೆ.ನಮ್ಮ ಪಾತ್ರ ಏನೂ ಇಲ್ಲ ಎಂದು ಹೇಳುತ್ತಾರೆ.ನಾವು ವೇತನ ಪಾವತಿಸುವಂತೆ ಬಿಇಓಗೆ ಸೂಚಿಸಿದ್ದೇನೆ ಎಂದು ತಿಳಿಸುತ್ತಾರೆ.ಆದರೆ ಬಿಇಓ ಶಿಕ್ಷಕರ ವೇತನ ಪಾವತಿಗೆ ಮೀನಮೇಷ ಎಣಿಸುತ್ತಿರುವುದು ಯಾತಕ್ಕಾಗಿ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಶಿಕ್ಷಕರ ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಭರವಸೆ ದೊರೆಯದಿದ್ದ ಪಕ್ಷದಲ್ಲಿ ಭಾನುವಾರದಿಂದ ಬಿಇಓ ಕಚೇರಿಯ ಆವರಣದಲ್ಲಿ ಅಡುಗೆ ಮಾಡಿಕೊಂಡು ಹೋರಾಟ ಮುಂದುವರೆಸುತ್ತೇವೆ.ಸೆ.5 ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲೂ ಶಿಕ್ಷಕರು ಕುಟುಂಬ ಸಮೇತರಾಗಿ ಗ್ರಾಮಸ್ಥರೊಂದಿಗೆ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಕೋರಿ,ನಾನಾಗೌಡ ಕೊಣ್ಣೂರ,ನಿಂಗಪ್ಪ ರಕ್ಕಸಗಿ,ಗುರು ಬಿರಾದಾರ,ಎಸ್.ಬಿ. ಬಿರಾದಾರ, ಬಿ.ಎಸ್.ಪಾಟೀಲ್,ಎಸ್.ಎಸ್.ಅವಟಿ,ಜೆ.ಎಸ್.ಪ್ಯಾಟಿ ಇದ್ದರು.
ಪ್ರಭಾರ ಬಿಇಒ ನಿರುತ್ತರ ಢವಳಗಿ ಶಾಲೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರಭಾರಿ ಬಿಇಓ ಆಗಿರುವ ಯು.ಬಿ.ಧರಿಕಾರ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ.ಡಿಎಸ್‌ಕೀ ಬಂದಿದೆ ಎಂಬುದನ್ನಷ್ಟೇ ಹೇಳಿದರಾದರೂ ಈ ಸಮಸ್ಯೆಗೆ ಪರಿಹಾರ ಯಾವಾಗ ಎಂಬುದನ್ನು ಹೇಳಲಿಲ್ಲ.