ಮೂರು ತಿಂಗಳು ಕೇಂದ್ರ ಸ್ಥಾನದಲ್ಲಿರಿ

kpp meeting
ಕೊಪ್ಪ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ತಹಸೀಲ್ದಾರ್ ಲಿಖಿತಾ ಮೋಹನ್, ನವೀನ್‌ಕುಮಾರ್, ಎಂ.ಕೆ.ಬಾಲಾಜಿ ಸಿಂಗ್ ಇತರರಿದ್ದರು.
Published on

ಕೊಪ್ಪ: ಮುಂಗಾರು ಆರಂಭವಾಗಿದ್ದು ತಾಲೂಕಿನ ಗುಡ್ಡಗಾಡು ಪ್ರದೇಶಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ತೀವ್ರ ಎಚ್ಚರವಹಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು.

ತಾಲೂಕು ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಮೇನಲ್ಲಿಯೇ ಮುಂಗಾರು ಮಳೆ ಆರಂಭವಾಗಿದೆ. ಒಬ್ಬರ ಸಾವು ಕೂಡ ಸಂಭವಿಸಿದೆ. ಮನೆ, ಕೊಟ್ಟಿಗೆ ಮುಂತಾದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಜೂನ್‌ನಲ್ಲಿ ಮಳೆ ಹೆಚ್ಚಾಗುವ ವರದಿಯಿದೆ. ಆದ್ದರಿಂದ ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಿನ ಮೂರು ತಿಂಗಳು ಕೇಂದ್ರ ಸ್ಥಾನದಲ್ಲಿಯೇ ದಿನದ 24 ಗಂಟೆಯೂ ಜಾಗೃತರಾಗಿರಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ, ಇಲಾಖಾವಾರು ಅಧಿಕಾರಿಗಳ ಜತೆಯಲ್ಲಿ ಒಂದು ಹಂತದಲ್ಲಿ ವಿಪತ್ತು ನಿರ್ವಹಣಾ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಮೇನಲ್ಲಿ ಮಳೆಗೆ 5 ಮನೆಗಳಿಗೆ ಹಾನಿಯಾಗಿದೆ. ಜತೆಗೆ ಆಟೋ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಾಪಂ ಇಒ ನವೀನ್‌ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿವಾರು ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿರುವ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲಾಗುತ್ತದೆ. ಪಂಚಾಯಿತಿಯಲ್ಲಿ ಬಗೆಹರಿಯದ ಸಮಸ್ಯೆಯನ್ನು ತಾಲೂಕು ಮಟ್ಟದಲ್ಲಿ ಪರಿಹಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಡಿವೈಎಸ್‌ಪಿ ಎಂ.ಕೆ.ಬಾಲಾಜಿ ಸಿಂಗ್, ವಿವಿಧ ಇಲಾಖೆಯ ಅಧಿಕಾರಿಗಳು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ರಾಜಾಶಂಕರ್, ಸಾಧಿಕ್, ಪ್ರಿಯಾಂಕಾ ಇತರರಿದ್ದರು.

ಮನೆ, ಅಂಗನವಾಡಿ, ಶಾಲೆಗಳ ಮೇಲೆ ಮರ ಬೀಳುವ ಹಂತದಲ್ಲಿ ಇದ್ದರೇ ಕೂಡಲೇ ಕತ್ತರಿಸಿ. ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಆದೇಶ ಬರುವವರೆಗೂ ಕಾಯುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸಹ ಅರ್ಜಿಯನ್ನು ಸ್ವೀಕರಿಸಿ. ಕಾನೂನು ಪುಸ್ತಕ ತೆರೆಯಬೇಡಿ ಎಂದು ಶಾಸಕ ಟಿ.ಡಿ.ರಾಜೇಗೌಡ ಚಾಟಿ ಬೀಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ರಂಗನಾಥ್, ಹಾನಿಯುಂಟು ಮಾಡುವಂತಹ ಮರಗಳನ್ನು ತೆರವುಗೊಳಿಸಲು ಒಪ್ಪಿಗೆ ನೀಡಲಾಗುತ್ತಿದೆ. ಮಳೆಗೆ ಬಿದ್ದ ಮರಗಳನ್ನು ತಕ್ಷಣದಲ್ಲಿಯೇ ಕತ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net