ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ

MLA NEWS
Published on

ಕೆ.ಆರ್.ಪೇಟೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಮಸ್ಯೆ ಬಗೆಹರಿಸಿದರೆ ಕ್ಷೇತ್ರದ ಶಾಸಕರಿಗೆ ಜವಾಬ್ದಾರಿ ಕಡಿಮೆಯಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕಿನ ಶೀಳನೆರೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿರುವ ಸುಮಾರು 300 ಗ್ರಾಮಗಳ ಸಮಸ್ಯೆಗಳನ್ನು ಶಾಸಕರು ಏಕಕಾಲಕ್ಕೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿಗಳಿಗೆ ಸ್ಥಳೀಯ ಸರ್ಕಾರ ಎಂದು ಸಾಂವಿಧಾನಿಕವಾಗಿ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದನ್ನು ಸಮರ್ಪಕ ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿಗಳು ತಮ್ಮ ಅಧಿಕಾರವನ್ನು ಚಲಾಯಿಸುವ ಮೂಲಕ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಮಟ್ಟದಲ್ಲಿ ನಡೆಯುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ಅದೇ ರೀತಿ ಗ್ರಾ ಪಂಚಾಯಿತಿ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವ ಅಧಿಕಾರ ವಿಕೇಂದ್ರೀಕರಣವನ್ನು 2018-19ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿಗೆ ತಂದರು. ಅಂದಿನಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪಂಚಾಯಿತಿ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಗುತ್ತಿದೆ. ಆದರೆ, ನಮ್ಮ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಕೆಡಿಪಿ ಯೋಜನೆ ಜಾರಿಯಾಗಿರಲಿಲ್ಲ. ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಅಧಿಕಾರಿಗಳನ್ನು ಜನಸಾಮಾನ್ಯರ ಕೆಲಸವನ್ನು ಹೇಗೆ ಮಾಡುತ್ತಿದ್ದಾರೆ. ಮಾಡದೆ ಇದ್ದರೆ ಏಕೆ ಮಾಡಿಲ್ಲ, ವಿಳಂಬ ಮಾಡುತ್ತಿದ್ದರೆ ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಪ್ರಶ್ನಿಸುವ ಮೂಲಕ ಜನ ಸಾಮಾನ್ಯರ ಕೆಲಸಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮಾಡಿಸುವ ಸಾಂವಿಧಾನಿಕ ಹಕ್ಕನ್ನು ಪ್ರಗತಿ ಪರಿಶೀಲನಾ ಸಭೆಗೆ ನೀಡಲಾಗಿದೆ ಎಂದು ಹೇಳಿದರು.

ಕೆಡಿಪಿ ಸಭೆಯನ್ನು ಪ್ರತಿ ಹೋಬಳಿಗೊಂದು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿ ಗ್ರಾಮ ಪಂಚಾಯಿತಿಗಳಿಗೆ ಇರುವ ಅಧಿಕಾರವನ್ನು ತಿಳಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳು, ಸಹಕಾರ ಸಂಸ್ಥೆಗಳು, ಸರ್ಕಾರಿ ಅನುಧಾನ ಪಡೆಯುವ ಎಲ್ಲ ಸಂಸ್ಥೆಗಳು ಸಹ ಕೆಡಿಪಿ ಸಭೆಗೆ ಬಂದು ತಮ್ಮ ಸಂಸ್ಥೆಯ ಪ್ರಗತಿಯ ಬಗ್ಗೆ ವರದಿ ಮಂಡಿಸಬೇಕು. ಸಭೆಗೆ ಬಾರದೆ ಗೈರು ಹಾಜರಾದರೆ ಕಾರಣ ಕೇಳಿ ನೋಟಿಸ್ ನೀಡಬೇಕು. ಮುಂದಿನ ಕೆಡಿಪಿ ಸಭೆಗೆ ಕಡ್ಡಾಯವಾಗಿ ಬರುವಂತೆ ತಿಳಿವಳಿಕೆ ಪತ್ರ ನೀಡಬೇಕು ಎಂದು ತಿಳಿಸಿದರು.

ನಾಡಕಚೇರಿಯ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಸೆಸ್ಕ್ ಇಂಜಿನಿಯರ್ ಸುನೀಲ್‌ಕುಮಾರ್, ಪಿಯು ಕಾಲೇಜಿನ ಪ್ರಾಂಶುಪಾಲ ಕತ್ತರಘಟ್ಟ ವಾಸು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ತಾಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಪಿಡಿಒ ನವೀನ್, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ಎಸ್.ಪಿ.ಸಿದ್ದೇಶ್, ಎಸ್.ಕೆ.ಪ್ರಕಾಶ್, ಮರಡಹಳ್ಳಿ ಪ್ರದೀಪ್, ಗಾಯತ್ರಿ ಸಿದ್ದೇಶ್, ಸವಿತಾ ಬಲರಾಂ, ನಿರ್ಮಲಾ ಗಂಗಾಧರಾಚಾರ್, ಕಾಂತರಾಜು, ಮೋಹನ್, ಲಕ್ಷ್ಮೀ, ಸೌಂದರ್ಯ ಉದೇಶ್, ಜಕ್ಕನಹಳ್ಳಿ ರೇಣುಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net