

ಹಾಸನ:ಲೋಕಸಭಾ ಚುನಾವಣೆ ಮುಗಿದ ಮೇಲೆ ಮೂರು ಉಪಮುಖ್ಯಮಂತ್ರಿಯಾಗಳ ನೇಮಕಕ್ಕೆ ಸಂಬಂಧಿಸಿದಂತೆ ನಾನು ಸೇರಿದಂತೆ ಹಲವು ಸಚಿವರು ಪ್ರಬಲವಾದಂತಹ ಪ್ರತಿಪಾದನೆ ಮಾಡಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಹಾಯಕ, ಧ್ವನಿ ಇಲ್ಲದ ಸಮುದಾಯಗಳಿಗೆ ರಾಜಕೀಯ ಅಧಿಕಾರ ಕೊಟ್ಟಾಗ ಮಾತ್ರ ಆ ಸಮುದಾಯದ ಜನರ ಪ್ರೀತಿ ಪಕ್ಷದ ಮೇಲಿರುತ್ತದೆ. ಆ ದೃಷ್ಟಿಯಿಂದ ನಾವು ಸಲಹೆ ಕೊಟ್ಟಿದ್ದೇವೆ. ನನಗೆ ಡಿಸಿಎಂ ಸ್ಥಾನ ಬೇಕಾಗಿಲ್ಲ, ನಾನು ಕೇಳುವುದಿಲ್ಲ, ಪಕ್ಷದ ಹಿತ ದೃಷ್ಟಿಯಿಂದ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಮೂರು ಡಿಸಿಎಂ ನೇಮಕಕ್ಕೆ ಸಂಬಂಧಿಸಿದಂತೆ ಇದರ ಬಗ್ಗೆ ಬೇಡಿಕೆಯನ್ನ ಪಕ್ಷದ ವೇದಿಕೆಯಲ್ಲಿ ರಾಜ್ಯದ ನಾಯಕರಿಗೆ ಮತ್ತು ಕೇಂದ್ರದ ನಾಯಕರಿಗೆ ಇಟ್ಟಿದ್ದೇವೆ. ಈ ಬಗ್ಗೆ ಕೆಲಸಚಿವರು ವಿರೋಧವಾಗಿದ್ದಾರೆ, ಇನ್ನು ಕೆಲವರು ಪರವಾಗಿದ್ದಾರೆ. ಆದರೆ, ಅಂತಿಮವಾಗಿ ಕೇಂದ್ರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ಇಲ್ಲಿ ಸ್ಥಳೀಯವಾಗಿ ಏನು ಅಭಿಪ್ರಾಯಗಳು ವ್ಯಕ್ತವಾಗುತ್ತವೆ, ಅದನ್ನು ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ವರಿಷ್ಠರನ್ನ ಮನವೊಲಿಸಿ ಪರಿಹಾರ ಕಂಡುಕೊಳ್ಳುವುದು ಪಕ್ಷದ ನೀತಿ, ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಈ ವಿಚಾರ ಕೇಂದ್ರದ ಮುಖಂಡರ ಗಮನದಲ್ಲೂ ಇದರು ಕೂಡ ಅಂತಿಮವಾಗಿ ಆದಷ್ಟು ಜಾಗೃತವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂಬುದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವುವಾಗಿರುವಂತಹ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪರ್ಧೆ ಸಾಧ್ಯತೆ ಬಗ್ಗೆ ಸಹಕಾರ ಸಚಿವರು ಫಿಫ್ಟಿ-ಫಿಫ್ಟಿ ಇದೆ. ಅವರು ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದಾರೆ. ಇನ್ನೊಂದೆಡೆ ಸ್ಪರ್ಧೆ ಮಾಡಬಾರದು ಅಂತನು ಇದ್ದಾರೆ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.