

ಹಾಸನ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದ ಮುಂದೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ನಂತರ ಕಾಂಗ್ರೆಸ್ ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಡೆದಂತಹ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷ ಬಡವರ ಪರವಾಗಿ, ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರವಾಗಿ ಹಾಗೂ ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆಡಳಿತ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳು ಎಲ್ಲವನ್ನೂ ಒಪ್ಪಿಕೊಂಡ ಮತದಾರ ಈ ಉಪ ಚುನಾವಣೆಯಲ್ಲಿ ಉತ್ತಮ ಪಲಿತಾಂಶ ನೀಡಿದ್ದಾರೆ. ಸುಳ್ಳಿನ ಅಪಪ್ರಚಾರಕ್ಕೆ, ಕುಟುಂಬ ರಾಜಕಾರಣಕ್ಕೆ ಮತ್ತು ಉದ್ದೇಶ ಪೂರ್ವಕವಾಗಿ ಟೀಕೆ-ಟಿಪ್ಪಣಿ ಮಾಡಿದಂತಹ ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಗೆ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದಾರೆ. ಜಾರ್ಖಂಡ್‌ನಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದೆ. ನಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೇರಳದ ವಯನಾಡಿನಲ್ಲಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಕ್ಷೇತ್ರದ ಜನತೆಗೂ ಕೂಡ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ದೇವಪ್ಪ ಮಲ್ಲಿಗೆವಾಳು, ಚಂದ್ರಶೇಖರ್, ರಘು ದಾಸರಕೊಪ್ಪಲು, ಅಶೋಕ್ ನಾಯಕರಹಳ್ಳಿ, ಶಿವಕುಮಾರ್ ವಿಶ್ವನಾಥ್, ಬೂದೇಶ್, ರಾಮಚಂದ್ರು ಇತರರು ಉಪಸ್ಥಿತರಿದ್ದರು.