

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಖಚಿತ ಮಾಹಿತಿ ಮೇರೆಗೆ ನಗರದ ಉದ್ಯಮಿ ರಮೇಶ ಬೊಣಗೇರಿ ಅವರ ನಿವಾಸದ ಮೇಲೆ ಶನಿವಾರ ಮಿಂಚಿನ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ರೂ. ನಗದು ಜಪ್ತಿ ಮಾಡಿದ್ದಾರೆ.
ಸಿಸಿಬಿ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಸಿಸಿಬಿ ಘಟಕದ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ದಾಖಲಾತಿ ಇಲ್ಲದ 500 ರೂ. ಮುಖ ಬೆಲೆಯ ಮೂರು ಕೋಟಿ ರೂ. ಜಪ್ತಿ ಮಾಡಿದ್ದು, ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಣದ ಮೂಲ, ಸಂಗ್ರಹಿಸಿಟ್ಟಿದ್ದ ಉದ್ದೇಶದ ಕುರಿತು ಪೊಲೀಸ್ ಇನ್ಸ್ಪೆಕ್ಟರ್ ಎಸ್.ಕೆ. ಪಟ್ಟಣಕುಡೆ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ್ದು, ಹೆಚ್ಚಿನ ಪರಿಶೀಲನೆಗಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಎಸಿಪಿ ನಾರಾಯಣ ಬರಮನಿ, ತನಿಖಾ ತಂಡದ ಎಎಸ್ಐ ಬಿ.ಎನ್. ಲಂಗೋಟಿ, ಸಿಬ್ಬಂದಿ ಬಸವರಾಜ ಬೆಳಗಾವಿ, ಎಫ್.ಬಿ. ಕುರಿ, ರಾಜೀವ ಬಿಷ್ಟಂಡೇರ, ಸಂತೋಷ ಇಚ್ಚಂಗಿ, ವಿದ್ಯಾ ದಳವಾಯಿ ಅವರ ಯಶಸ್ವಿ ಕಾರ್ಯಾಚರಣೆ ಮೆಚ್ಚಿ ಪೊಲೀಸ್ ಆಯುಕ್ತ ರಮಣ ಗುಪ್ತಾ ಅವರು ತಂಡಕ್ಕೆ 25 ಸಾವಿರ ರೂ. ನಗದು ಘೊಷಣೆ ಮಾಡಿದ್ದಾರೆ.