

ನರಗುಂದ: ಪಟ್ಟಣದಲ್ಲಿ ಭಾನುವಾರ ಮೂರು ಕಡೆ ಭೂಕುಸಿತ ಸಂಭವಿಸಿದೆ.
ಪಟ್ಟಣದ ಸಿದ್ದನಭಾವಿ ಬಡಾವಣೆಯ ಮಾರುಕಟ್ಟೆ ಮುಖ್ಯರಸ್ತೆಯಲ್ಲಿರುವ ಚಂಬಣ್ಣ ಬಸಲಿಂಗಪ್ಪ ಕತ್ತಿ ಎಂಬುವರ ಮನೆಯಲ್ಲಿ ಭೂಕುಸಿತ ಸಂಭವಿಸಿದೆ. ಮನೆಯ ಎರಡು ಗೋಡೆಗಳು, ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಸದಸ್ಯರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಂಬಣ್ಣ ಕತ್ತಿ ಅವರ ಪತ್ನಿ ಜಯಶ್ರೀ ಅವರು ಭಾನುವಾರ ಬೆಳಗ್ಗೆ ಕಸಗೂಡಿಸುತ್ತಿದ್ದಾಗ ಪಡಸಾಲೆಯಲ್ಲಿ ವಿಚಿತ್ರ ಶಬ್ಧ ಕೇಳಿ ಬಂದಿದೆ. ನೋಡುನೋಡುತ್ತಿದ್ದಂತೆಯೇ ಬೃಹದಾಕಾರದ ಗುಂಡಿ ಬಿದ್ದಿದೆ. ಇದರಿಂದ ಭಯಭೀತರಾದ ಜಯಶ್ರೀ ಅಲ್ಲಿಂದ ಅಡುಗೆ ಮನೆಯತ್ತ ಓಡಿಹೋಗಿದ್ದಾರೆ.
ಸ್ಥಳಕ್ಕೆ ಪುರಸಭೆ ಸದಸ್ಯ ದೇವಣ್ಣ ಕಲಾಲ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಭೇಟಿ ನೀಡಿ, ಗುಂಡಿ ಮುಚ್ಚಿಸುವ ಭರವಸೆ ನೀಡಿದ್ದಾರೆ. ಪುರಸಭೆಯ ನೌಕರ, ಕಸಬಾ ಬಡಾವಣೆಯ ನಿವಾಸಿ ಅಣ್ಣಪ್ಪಗೌಡ ದೊಡಮನಿ ಹಾಗೂ ಅರ್ಭಾಣ ಬಡಾವಣೆಯ ನಿಂಗಪ್ಪ ಸೊಪ್ಪಿನ ಎಂಬುವರ ಮನೆಗಳಲ್ಲೂ ಭೂ ಕುಸಿತ ಸಂಭವಿಸಿದೆ. ಯಾವುದೇ ಹಾನಿಯಾಗಿಲ್ಲ. ಬೃಹದಾಕಾರದ ಗುಂಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಳ್ಳುತ್ತಿದೆ.
ಮಾರುಕಟ್ಟೆಗೆ ತೆರಳುವ ರಸ್ತೆ ಅಕ್ಕಪಕ್ಕದ ಚರಂಡಿಗಳನ್ನು ಕಳೆದ 20 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವ ಮಳೆಯ ನೀರು ನಮ್ಮ ಮನೆಯೊಳಗಡೆ ನುಗ್ಗಿದೆ. ಇದರಿಂದಾಗಿ ಭಾನುವಾರ ನಮ್ಮ ಮನೆಯಲ್ಲಿ ಬೃಹದಾಕಾರದ ಭೂಕುಸಿತ ಸಂಭವಿಸಿರಬಹುದು ಎಂದು ಬಸಲಿಂಗಪ್ಪ ಕತ್ತಿ ಆರೋಪಿಸಿದರು.