

ಗುಂಡ್ಲುಪೇಟೆ: ಬಂಡೀಪುರದಲ್ಲಿ ಕಾಲಿಗೆ ಗಾಯವಾಗಿ ಕಣ್ಮರೆಯಾಗಿರುವ ಹುಲಿಗಾಗಿ ಮೂರನೇ ದಿನವೂ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ. ಆದರೆ ನಾಲ್ಕು ಮರಿಗಳು ಕಾಣಿಸಿಕೊಂಡಿದ್ದು, ಎಲ್ಲವೂ ಸುರಕ್ಷಿತವಾಗಿವೆ.
ಸಫಾರಿಗೆ ಹೋಗುವ ಪ್ರವಾಸಿಗರಿಗೆ ತನ್ನ ನಾಲ್ಕು ಮರಿಗಳೊಂದಿಗೆ ಕೆರೆಗಳ ಸಮೀಪ ಕಾಣಿಸಿಕೊಳ್ಳುತ್ತಿದ್ದ ಮೂರ್ಕೆರೆ ಫೀಮೇಲ್‌ಎಂಬ ಹೆಣ್ಣು ಹುಲಿ ಕೆಲವು ದಿನಗಳಿಂದ ಹಿಂಗಾಲಿಗೆ ಪೆಟ್ಟುಬಿದ್ದು ಕುಂಟುತ್ತಾ ಸಾಗುತ್ತಿತ್ತು. ಇತ್ತೀಚೆಗೆ ಈ ಹುಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದು ಅರಣ್ಯ ಇಲಾಖೆ ಹಾಗೂ ಪ್ರವಾಸಿಗರನ್ನು ಆತಂಕಕ್ಕೀಡು ಮಾಡಿದ್ದು, ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿದೆ.
ಅಕಸ್ಮಾತ್ ತಾಯಿ ಹುಲಿಗೆ ಏನಾದರೂ ಅಪಾಯವಾದಲ್ಲಿ ತಮ್ಮನ್ನು ಇತರ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಜತೆಗೆ ಆಹಾರಕ್ಕಾಗಿ ಬೇಟೆಯಾಡುವ ಕೌಶಲ ಕಲಿಯದ ಮರಿಗಳಿಗೆ ಆಹಾರ ಹಾಗೂ ಇತರ ಪ್ರಾಣಿಗಳಿಂದ ರಕ್ಷಣೆ ದೊರಕದೆ ಸಾವಿಗೀಡಾಗುವ ಸಂಭವವಿರುವುದರಿಂದ ಅರಣ್ಯ ಇಲಾಖೆ ಗಂಭೀರ ಹುಡುಕಾಟ ನಡೆಸಿದೆ.
ಮೊದಲನೇ ದಿನ ಹುಲಿ ಕಾಣಿಸಿದರೂ ಅದಕ್ಕೆ ಅರಿವಳಿಕೆ ಮದ್ದು ನೀಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಎರಡು ಹಾಗೂ ಮೂರನೇ ದಿನವೂ ಅರಣ್ಯ ಇಲಾಖೆಯ ಪಶು ವೈದ್ಯ ಡಾ.ವಾಸಿಂ ಮಿರ್ಜಾ ಮತ್ತು ಡಾ.ರಮೇಶ್ ಜತೆಗೂಡಿ ಅರಣ್ಯ ಸಿಬ್ಬಂದಿ ಹುಲಿಯ ಆವಾಸಸ್ಥಾನವಾದ ಸಫಾರಿ ರಸ್ತೆಯ ಮೂರ್ಕೆರೆ, ತಾವರೆಕಟ್ಟೆ, ಸೂಟಿಂಗ್ ರೋಡ್ ಮುಂತಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಬಹುಶಃ ಗಾಯದ ನೋವಿನಿಂದ ಪೊದೆಗಳ ಒಳಗೆ ತಾಯಿ ಹುಲಿ ಮಲಗಿರಬಹುದು. ಆದರೆ, ಸಂಜೆ ನಾಲ್ಕು ಮರಿಗಳು ಮಾತ್ರ ಕಂಡುಬಂದಿದ್ದು ಎಲ್ಲವೂ ಆರೋಗ್ಯವಾಗಿವೆ ಎಂದು ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ವಿಜಯವಾಣಿಗೆ ತಿಳಿಸಿದ್ದಾರೆ.