ಮೂರನೇ ಹಂತದ ಮೆಟ್ರೋಗೆ ಶ್ರೀಘ್ರ ಟೆಂಡರ್​

metro
Published on

ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು

ನಮ್ಮ ಮೆಟ್ರೋದ ಹಂತ&3ರ ಮಾರ್ಗ ನಿರ್ಮಾಣಕ್ಕೆ ಟೆಂಡರ್​ ಪ್ರಕ್ರಿಯೆ ಎರಡು ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದ ಕೆಂಪಾಪುರವರೆಗಿನ 32.15 ಕಿ.ಮೀ. ಉದ್ದದ "ಆರೆಂಜ್​ ಲೈನ್​' ಭೂಸ್ವಾಧಿನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಸುಲಭಗೊಳಿಸುವ "ಡಬಲ್​ ಡೆಕ್ಕರ್​' ನಿರ್ಮಾಣವೂ ಈ ಯೋಜನೆಯ ಭಾಗವಾಗಿದ್ದು, 3ನೇ ಹಂತ ಯಶಸ್ವಿಯಾದರೆ ನಗರದ ಸಂಪರ್ಕ ವ್ಯವಸ್ಥೆ ಸುಲಭವಾಗಲಿದೆ. ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದ ಕೆಂಪಾಪುರವರೆಗಿನ ಮಾರ್ಗದ ಡಿಸೈನ್​ ಕೆಲಸಗಳು ನಡೆಯುತ್ತಿದ್ದು, ಎರಡು ತಿಂಗಳೊಳಗಾಗಿ ಬಿಎಂಆರ್​ಸಿಎಲ್​ ಟೆಂಡರ್​ ಕರೆಯಲು ಸಿದ್ಧತೆ ನಡೆಸುತ್ತಿದೆ. ಯೋಜನೆಯ ಮೊದಲ ಹಂತವಾಗಿ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದವರೆಗೆ 25,180 ಚದರ ಮೀ. ಜಾಗವನ್ನು ಈಗಾಗಲೇ ಸ್ವಾಧಿನಪಡಿಸಿಕೊಂಡಿದೆ. ನಾಯಂಡಹಳ್ಳಿ, ನೈನಪ್ಪಶೆಟ್ಟಿಪಾಳ್ಯ ಸೇರಿ 10 ಗ್ರಾಮಗಳಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಡೆದಿದೆ.

ಜೆ.ಪಿ.ನಗರ 4ನೇ ಹಂತ&ಕೆಂಪಾಪುರ (32.15 ಕಿ.ಮೀ.) ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ (12.5 ಕಿ.ಮೀ.) ಎರಡು ಕಾರಿಡಾರ್​ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಕಾರಿಡಾರ್​-&1ಕ್ಕೆ 1,29,743 ಚ.ಮೀ. ವಿಸ್ತಿರ್ಣದ ಜಾಗವನ್ನು ಸ್ವಾಧಿನಪಡಿಸಿಕೊಳ್ಳಲಾಗುತ್ತಿದೆ. ಒಟ್ಟು 777 ಖಾಸಗಿ ಸ್ವತ್ತುಗಳನ್ನು ಗುರುತಿಸಿದ್ದು, ಭೂಸ್ವಾಧಿನಕ್ಕೆ ಮಾತ್ರ ಅಂದಾಜು 1,900 ಕೋಟಿ ರೂ. ವೆಚ್ಚ ತಗುಲಲಿದೆ.

ಡಬಲ್​ ಡೆಕ್ಕರ್​ ನಿಮಾರ್ಣ: ವಿಸತ ಯೋಜನಾ ವರದಿ (ಡಿಪಿಆರ್​)ಯಂತೆ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದ್ದು, ಡಬಲ್​ ಡೆಕ್ಕರ್​ ಮಾರ್ಗ ನಿಮಾರ್ಣ ಯೋಜನೆಯ ಭಾಗವಾಗಿದೆ. ಈ ಮಾರ್ಗದಲ್ಲಿರುವ ಮೇಲ್ಸೇತುವೆ, ಕೆಳಸೇತುವೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗುವುದು ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಸ್ವತ್ತು ಸ್ವಾಧಿನ ಹೆಚ್ಚು!

ಎಂಟು ನಿಲ್ದಾಣಗಳೊಂದಿಗೆ ನಿಮಾರ್ಣಗೊಳ್ಳಲಿರುವ ಮೊದಲ ಹಂತದ ಕಾಮಗಾರಿ ಜೆ.ಪಿ. ನಗರ 4ನೇ ಹಂತದಿಂದ ಮೈಸೂರು ರಸ್ತೆವರೆಗಿನ 10.93 ಕಿ.ಮೀ. ಮಾರ್ಗದಲ್ಲಿ ನಡೆಯಲಿದೆ. ಜೆ.ಪಿ. ನಗರ 4ನೇ ಹಂತ, 5ನೇ ಹಂತ, ಜೆ.ಪಿ. ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್​ ನಿಲ್ದಾಣ, ಹೊಸಕೆರೆಹಳ್ಳಿ, ದ್ವಾರಕಾನಗರ ಹಾಗೂ ಮೈಸೂರು ರಸ್ತೆಯಲ್ಲಿ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸುಮಾರು 100 ಕಟ್ಟಡಗಳು ನೆಲಸಮಗೊಳ್ಳಲಿವೆ. ಹೊಸಕೆರೆಹಳ್ಳಿ ಭಾಗದಲ್ಲಿ ಸ್ವಾಧಿನಕ್ಕೆ ಒಳಪಡುವ ಕಟ್ಟಡಗಳ ಸಂಖ್ಯೆ ಕಡಿಮೆ ಇವೆ. ಕಟ್ಟಡಗಳ ಕಾಂಪೌಂಡ್​ ಹಾಗೂ ಮರಗಳಷ್ಟೇ ತೆರವಾಗಲಿವೆ. ಈ ಮಾರ್ಗದಲ್ಲಿ ಸರ್ಕಾರಿ ಜಮೀನು ಕಡಿಮೆ ಇದ್ದು, ಖಾಸಗಿ ಸ್ವತ್ತುಗಳನ್ನೇ ಸ್ವಾಧಿನಪಡಿಸಿಕೊಳ್ಳಬೇಕಿರುವುದು ಸವಾಲಾಗಿದೆ.

ಇಂಟರ್​ಚೇಂಜ್​ ನಿಲ್ದಾಣಗಳು

ತುಮಕೂರು ರಸ್ತೆಯ ಹಸಿರು ಮಾರ್ಗದ ಪೀಣ್ಯ ನಿಲ್ದಾಣ ಮತ್ತು ಜೆ.ಪಿ.ನಗರ ನಿಲ್ದಾಣ, ನೇರಳೆ ಮಾರ್ಗದ ಮೈಸೂರು ರಸ್ತೆ ನಿಲ್ದಾಣ ಹಾಗೂ ಹೊಸಹಳ್ಳಿ- ಕಡಬಗೆರೆ ಮಾರ್ಗದ ಸುಮನಹಳ್ಳಿಯಲ್ಲಿ ಇಂಟರ್​ಚೇಂಜ್​ ನಿಲ್ದಾಣಗಳು ನಿಮಾರ್ಣವಾಗಲಿವೆ. ಅಲ್ಲದೆ, ಇದು ಹೆಬ್ಬಾಳದಲ್ಲಿ ನೀಲಿ ಮಾರ್ಗ (ಕೆಐಎ) ಮತ್ತು ಕೆಂಪು ಮಾರ್ಗವನ್ನು (ಹೆಬ್ಬಾಳ-&ಸರ್ಜಾಪುರ ಮಾರ್ಗ) ಸೇರಲಿದೆ.

ಮುಖ್ಯಾಂಶ:

* ಕಾರಿಡಾರ್​-&1: ಜೆ.ಪಿ.ನಗರ 4ನೇ ಹಂತ&ಕೆಂಪಾಪುರ, 32.15 ಕಿ.ಮೀ, 23 ನಿಲ್ದಾಣ

* ಕಾರಿಡಾರ್​-&2: ಹೊಸಹಳ್ಳಿ& ಕಡಬಗೆರೆ, 12.5 ಕಿ.ಮೀ., 9 ನಿಲ್ದಾಣ

* ಒಟ್ಟು ಯೋಜನಾ ವೆಚ್ಚ 15,611 ಕೋಟಿ ರೂ.

* ಒಟ್ಟು ಸಾಲ 7,577 ಕೋಟಿ ರೂ.

* ಇನ್ನಿತರ ಮೂಲಗಳಿಂದ ಆದಾಯ 450 ಕೋಟಿ ರೂ.

* ಅಗತ್ಯವಿರುವ ಕೋಚ್​ಗಳು 252

ಸ್ವಾಧಿನಗೊಳ್ಳಲಿರುವ ಜಾಗ

ಪ್ರದೇಶ ವಿಸ್ತೀರ್ಣ (ಚ.ಮೀ.ಗಳಲ್ಲಿ)

ನೈನಪ್ಪಶೆಟ್ಟಿಪಾಳ್ಯ -1,116

ಬಿಳೇಕಹಳ್ಳಿ -1,499

ಸಾರಕ್ಕಿ -4,993

ಜರಗನಹಳ್ಳಿ -4,556

ಕದಿರೇನಹಳ್ಳಿ -82

ಕರೀಸಂದ್ರ -787

ಕತ್ರಿಗುಪ್ಪೆ -1,549

ಹೊಸಕೆರೆಹಳ್ಳಿ -3,452

ಪಂತರಪಾಳ್ಯ -1,872

ನಾಯಂಡಹಳ್ಳಿ -5,271

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net