ಮೂರನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

7kglphoto3..,,,
Published on

ಕೊಳ್ಳೇಗಾಲ: ಪಟ್ಟಣದ ಬಸ್ ಟರ್ಮಿನಲ್ ಉದ್ಘಾಟನೆಗೆ ಒತ್ತಾಯಿಸಿ ನಗರಸಭಾ ಬಿಜೆಪಿ ಸದಸ್ಯರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನವಾದ ಮಂಗಳವಾರವೂ ಮುಂದುವರಿದಿತ್ತು.

ಮಾ.4ರಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಬಸ್ ಟರ್ಮಿನಲ್ ನಿರ್ಮಾಣ ಕಾಮಗಾರಿಯಲ್ಲಿ ಲೋಪವಿದ್ದು ಎಲ್ಲವೂ ಸರಿಯಾದ ಬಳಿಕ ಉದ್ಘಾಟನೆಯಾಗಲಿ ಎಂದು ನಿರ್ಣಯ ಪಾಸ್ ಮಾಡಿದ್ದರು. ಇದನ್ನು ವಿರೋಧಿಸಿ ನಗರಸಭಾ ಸದಸ್ಯರಾದ ಮಧುಚಂದ್ರ, ಕವಿತಾ, ಮುಖಂಡ ರಮೇಶ್ ಮಾ.6 ರಂದು ಬಸ್ ನಿಲ್ದಾಣ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಮನವೊಲಿಕೆಗೂ ಜಗ್ಗದ ಸದಸ್ಯರು: ಸದಸ್ಯರನ್ನು ಭೇಟಿ ಮಾಡಿದ ಉಪವಿಭಾಗಾಧಿಕಾರಿ ಗೀತಾ ಹುಡೇದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಇಂದು ಸ್ಥಳಕ್ಕೆ ಬಂದಿದ್ದೇನೆ. ಬೇಡಿಕೆ ಏನೇ ಇದ್ದರೂ ಅದನ್ನು ಕುಳಿತು ಚರ್ಚಿಸೋಣ. ಉಪವಾಸ ಹೋರಾಟ ಕೈ ಬಿಡುವಂತೆ ಮನವೊಲಿಸಿದರು. ಈ ವೇಳೆ ನಗರಸಭಾ ಸದಸ್ಯ ಮಧುಚಂದ್ರ ಮಾತನಾಡಿ, ನಮ್ಮ ಆರೋಗ್ಯಕ್ಕಿಂತ ಸಾರ್ವಜನಿಕರ ಹಿತರಕ್ಷಣೆ ಮುಖ್ಯ. ಆದ್ದರಿಂದಲೇ ಹೋರಾಟ ಪ್ರಾರಂಭಿಸಿದ್ದೇವೆ. ಬಸ್ ನಿಲ್ದಾಣ ಉದ್ಘಾಟನೆಗೊಂಡು ಸಾರ್ವಜನಿಕರ ಉಪಯೋಗಕ್ಕೆ ಬರಬೇಕೆಂಬುದು ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್ ಸದಸ್ಯರ ರಾಜಕೀಯ ದುರುದ್ದೇಶದಿಂದ ಬಸ್ ನಿಲ್ದಾಣ ಜನರ ಉಪಯೋಗಕ್ಕೆ ಸಿಗುತ್ತಿಲ್ಲ ಎಂದು ಶಂಕರ್ ದೂರಿದರು. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬಸ್ ಸ್ಟಾಂಡ್ ಉದ್ಘಾಟನೆ ಮಾಡಬೇಕೆಂದು ರಮೇಶ್, ಬಸವರಾಜು, ಜಗದೀಶ್, ಇತರರು ಪಟ್ಟುಹಿಡಿದರು. ನಗರಸಭೆ ಪೌರಾಯುಕ್ತ ರಾಜಣ್ಣ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ.

ಹೋರಾಟಕ್ಕೆ ಜಿಲ್ಲಾ ಬಿಜೆಪಿ ಸಾಥ್: ನಗರಸಭೆ ಬಿಜೆಪಿ ಸದಸ್ಯರು ಕೈ ಗೊಂಡಿರುವ ಹೋರಾಟವನ್ನು ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಉಪಾಧ್ಯಕ್ಷ ರಾಜಶೇಖರ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನಟರಾಜೇಗೌಡ, ತಾಲೂಕು ಅಧ್ಯಕ್ಷ ನಾಗಣ್ಣ, ನಗರ ಮಂಡಲ ಅಧ್ಯಕ್ಷ ರಮೇಶ್ ಮುರಾರಿ, ಜಿ.ಸೆಲ್ವರಾಜ್, ರಾಮಕೃಷ್ಣ, ಬೆಂಬಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಸಾರ್ವಜನಿಕರ ಹಣದಿಂದ ನಿರ್ಮಿಸಲಾಗಿರುವ ಬಸ್ ನಿಲ್ದಾಣದಲ್ಲಿ ರಾಜಕೀಯ ಮಾಡಬಾರದು. ಜನರ ಉಪಯೋಗಕ್ಕಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ. ನಮ್ಮ ಸದಸ್ಯರ ಹೋರಾಟ ಸರಿ ಇದೆ. ಇದಕ್ಕೆ ಸಂಪೂರ್ಣ ಬೆಂಬಲವಿದೆ. ಜಿಲ್ಲಾಡಳಿತ ಸಾರ್ವಜನಿಕರ ಹಿತ ದೃಷ್ಟಿಯಿಂದ ಬಸ್ ನಿಲ್ದಾಣ ಉದ್ಘಾಟಿಸಲಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net