

ಹುಣಸೂರು : ಮೂತ್ರಪಿಂಡ ವೈಫಲ್ಯದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದ ಜೋಡೆತ್ತುಗಳಿಗೆ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿವೆ.
ನಿಲುವಾಗಿಲು ಗ್ರಾಮದ ದಾಸಪ್ಪ ಅವರ ಜೋಡೆತ್ತುಗಳು ಮೃತಪಟ್ಟಿದ್ದು, ಮಾಲೀಕ ಕಂಗಾಲಾಗಿದ್ದಾರೆ. ಸೋಮವಾರ ಸಂಜೆ ಮನೆ ಬಳಿ ಕಟ್ಟಿಹಾಕಲಾಗಿದ್ದ ಎತ್ತುಗಳಿಗೆ ನೀರಿಗೆ ಭತ್ತದ ಹೊಟ್ಟು ಹಾಕಿ ಕುಡಿಸಿದ್ದಾರೆ. ನೀರು ಕುಡಿದ ಸ್ವಲ್ಪ ಹೊತ್ತಿನಲ್ಲೇ ಎತ್ತುಗಳು ಒದ್ದಾಡಲಾರಂಭಿಸಿರುವುದನ್ನು ಕಂಡು ಗಾಬರಿಗೊಂಡ ರೈತ ದಾಸಪ್ಪ ಪಶುವೈದ್ಯ ಇಲಾಖೆಗೆ ನೀಡಿದ ಮಾಹಿತಿ ಮೇರೆಗೆ ಹುಣಸೂರು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪಶು ವೈದ್ಯ ಡಾ.ರಮೇಶ್ ಬಂದು ತಕ್ಷಣವೇ ಚಿಕಿತ್ಸೆ ಆರಂಭಿಸಿ 20 ಬಾಟಲ್‌ನಷ್ಟು ಗ್ಲೂಕೋಸ್ ನೀಡಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10ರ ವೇಳೆಗೆ ಸಾವನ್ನಪ್ಪಿವೆ. ಕೃಷಿ ಮತ್ತು ಜೀವನಕ್ಕೆ ಆಧಾರವಾಗಿದ್ದ ಜೋಡೆತ್ತುಗಳ ಸಾವಿನಿಂದ ರೈತ ದಾಸಪ್ಪರ ಕುಟುಂಬ ಕಂಗಾಲಾಗಿ, ಕಣ್ಣೀರು ಹಾಕಿದ ದೃಶ್ಯ ಮನಮಿಡಿಯುವಂತಿತ್ತು.
ಮೂತ್ರಪಿಂಡ ವೈಫಲ್ಯ: ಮಂಗಳವಾರ ಹುಣಸೂರು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಚನ್ನಬಸಪ್ಪ ಮರಣೋತ್ತರ ಪರೀಕ್ಷೆ ನಡೆಸಿದ್ದು, ಎತ್ತುಗಳು ಹೊಟ್ಟೆತುಂಬ ಮೇವು ಮೇದಿದ್ದರಿಂದ ಹೊಟ್ಟೆ ಕಟ್ಟಿತ್ತು, ಈ ವೇಳೆ ನೀರು ಕುಡಿಸಿದ್ದಾರೆ. ಮೂತ್ರವಿಸರ್ಜನೆಯಾಗದೆ ಮೂತ್ರಪಿಂಡ ವೈಫಲ್ಯ ಉಂಟಾಗಿ ಸಾವನ್ನಪ್ಪಿದೆ. ಸರ್ಕಾರದಿಂದ ಪರಿಹಾರ ದೊರೆಯಲಿದೆ ಎಂದು ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಹೂಳಲಾಯಿತು.