

ಮೂಡಿಗೆರೆ: ಮೀನು, ಮಾಂಸದ ಅಂಗಡಿಗಳನ್ನು ಒಂದೇ ಕಟ್ಟಡದಲ್ಲಿ ತೆರೆಯಬೇಕು, ಎಂ.ಜಿ.ರಸ್ತೆ ಅಗಲೀಕರಣಗೊಳಿಸಬೇಕು, ಪಾರ್ಕಿಂಗ್ ಸಮಸ್ಯೆ, ವಾಹನ ದಟ್ಟಣೆ ನಿವಾರಿಸಬೇಕು. ಪಟ್ಟಣದ ಎಲ್ಲ ಕಡೆ ಶೌಚಗೃಹ ನಿರ್ಮಿಸಬೇಕು. ರಸ್ತೆ ಬದಿ ಕಸ ಸುರಿಯುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಬೀದಿ ದೀಪ ಸರಿಪಡಿಸಬೇಕು. ವ್ಯಾಪಾರ ಪರವಾನಗಿ ಪಡೆಯಲು ಕಂದಾಯ ಪಾವತಿ ವ್ಯವಸ್ಥೆ ಕೈಬಿಡಬೇಕು ಎಂದು ಬುಧವಾರ ಪಪಂ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಬೇಡಿಕೆ ಇರಿಸಿದರು.
ಮೀನು, ಮಾಂಸದ ಅಂಗಡಿಗಳನ್ನು ಒಂದೇ ಕಟ್ಟಡದಲ್ಲಿ ತೆರೆಯಬೇಕು ಎಂದು ಬ್ಯಾರಿ ಒಕ್ಕೂಟದ ತಾಲೂಕು ಅಧ್ಯಕ್ಷ ಬಿ.ಎಚ್.ಮಹಮ್ಮದ್ ಮತ್ತು ಆದರ್ಶ ಎಂಬುವವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಅಧ್ಯಕ್ಷ ಕೆ.ವೆಂಕಟೇಶ್ ಮೀನು, ಕುರಿ, ಕೋಳಿ ಮಾಂಸದ ಮಾರುಕಟ್ಟೆ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಸದ್ಯದಲ್ಲೇ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಎಂ.ಜಿ.ರಸ್ತೆ ಅಗಲೀಕರಣ ನನೆಗುದಿಗೆ ಬಿದ್ದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಶೀಘ್ರವಾಗಿ ರಸ್ತೆ ವಿಸ್ತರಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದಾಗ, ಎಂ.ಜಿ. ರಸ್ತೆ ವಿಸ್ತರಣೆಗೆ 50 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿತ್ತು. ವರ್ತಕರಿಂದ ವಿರೋಧವಿರಲಿಲ್ಲ. ಇಬ್ಬರು ಮಾತ್ರ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅಗಲೀಕರಣಕ್ಕೆ ಜಿಲ್ಲಾಧಿಕಾರಿಯಿಂದಾಗಲಿ ಅಥವಾ ನ್ಯಾಯಾಲಯದಿಂದಾಗಲಿ ತಡೆ ಇಲ್ಲ. ಸದ್ಯದಲ್ಲೇ ಸಭೆ ಕರೆದು ರಸ್ತೆ ಅಗಲೀಕರಣ ನಡೆಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಚರಂಡಿಗಳು ಬ್ಲಾಕ್ ಆಗಿವೆ. ನೀರಿನ ಪೈಪ್ ಅಳವಡಿಸಲು ಕಾಂಕ್ರೀಟ್ ರಸ್ತೆಯನ್ನು ಒಡೆದು ಚರಂಡಿ ನಿರ್ಮಿಸಿರುವುದರಿಂದ ಪಟ್ಟಣದಲ್ಲಿ ಧೂಳು ತುಂಬಿಕೊಂಡಿದೆ. ಪಟ್ಟಣದ ಬಡಾವಣೆಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕು. ವಾಹನದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಜಾರಿ ಮಾಡಬೇಕು. ಪಾದಚಾರಿ ರಸ್ತೆ ನಿರ್ಮಿಸಬೇಕು ಎಂದು ಟೈಲರ್ ಸಂಘದ ಮುಖಂಡರು ಒತ್ತಾಯಿಸಿದರು.
ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಲಯನ್ಸ್ ವೃತ್ತದ ಬಳಿ ಮತ್ತು ಪೊಲೀಸ್ ಠಾಣೆ ಮುಂಭಾಗದಲ್ಲಿ ಹೈಟೆಕ್ ಶೌಚಗೃಹ ನಿರ್ಮಿಸಲು ತೀರ್ಮಾನಿಸಲಾಗಿದೆ. ತತ್ಕೊಳ ರಸ್ತೆ ಅಭಿವೃದ್ಧಿಗೆ ಶಾಸಕಿ ನಯನಾ ಮೋಟಮ್ಮ 2 ಕೋಟಿ ರೂ. ಅನುದಾನ ಮೀಸಲಿರಿಸಿದ್ದಾರೆ. ಪಟ್ಟಣದಲ್ಲಿ ಸಮುದಾಯ ಭವನ, ಪಾದಚಾರಿ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೀದಿ ದೀಪಗಳು ಹಾಳಾಗಿವೆ ಎಂದು ಪಟ್ಟಣದ ಕುಮಾರ್ ಮತ್ತು ಜಿಯಾವುಲ್ಲಾ ಎಂಬುವವರು ಸಭೆಯ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಕೆ.ವೆಂಕಟೇಶ್, ಬೀದಿ ದೀಪ ನಿರ್ವಹಣೆ ಅಧಿಕಾರ ಪಪಂಗಿಲ್ಲ. ಬೀದಿ ದೀಪದ ಗುತ್ತಿಗೆ ಪಡೆದ ಗುತ್ತಿಗೆದಾರನ ಮೊಬೈಲ್ ನಂಬರ್ ಪಟ್ಟಣದ ಎಲ್ಲ ವಿದ್ಯುತ್ ಕಂಬದಲ್ಲಿ ಬರೆಯಲಾಗುವುದು. ಸಾರ್ವಜನಿಕರು ಅವರಿಗೆ ಕರೆ ಮಾಡಬೇಕು ಎಂದು ತಿಳಿಸಿದರು.
ವ್ಯಾಪಾರ ಪರವಾನಗಿ ಪಡೆಯಲು ಪಪಂಗೆ ಹೋದಾಗ ಕಟ್ಟಡದ ಕಂದಾಯ ಪಾವತಿಸುವಂತೆ ಅಧಿಕಾರಿಗಳು ಹೇಳಿ ಪರವಾನಗಿ ನೀಡಲು ಸತಾಯಿಸುತ್ತಾರೆ ಎಂದು ಕುಮಾರ್ ದೂರಿದಾಗ, ವರ್ತಕರು ವ್ಯಾಪಾರ ಪರವಾನಗಿ ಪಡೆಯುವ ವೇಳೆ ಕಂದಾಯ ಪಾವತಿ ವ್ಯವಸ್ಥೆ ಕೈಬಿಡಲಾಗುವುದು. ಅಧಿಕಾರಿಗಳು ವರ್ತಕರ ಬಳಿ ತೆರಳಿ ಸ್ಥಳದಲ್ಲೇ ವ್ಯಾಪಾರ ಪರವಾನಗಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಕಾಂಪೋಸ್ಟ್ ಗೊಬ್ಬರ ಮಾಡಿದರೆ ಪಪಂಗೆ ಆದಾಯ ಬರುತ್ತದೆ ಎಂದು ಟಿ.ಹರೀಶ್ ಎಂಬುವರು ಗಮನ ಸೆಳೆದಾಗ, ಕಾಂಪೋಸ್ಟ್ ಗೊಬ್ಬರ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ. ಸದ್ಯದಲ್ಲೇ ಏಜೆನ್ಸಿಗಳಿಗೆ ಟೆಂಡರ್ ನೀಡಲಾಗುವುದು ಎಂದು ಸದಸ್ಯೆ ಗೀತಾ ರಂಜನ್ ಅಜಿತ್‌ಕುಮಾರ್ ತಿಳಿಸಿದರು.
ಶುಕ್ರವಾರ ವಾರದ ಸಂತೆ ದಿನ ವಾಹನ ದಟ್ಟಣೆ ಹೆಚ್ಚಾಗಿದೆ. ಪೊಲೀಸರು ಮತ್ತು ಪಪಂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ದೂರಿದಾಗ, ಸಂತೆಯೊಳಗೆ ವಾಹನಗಳು ತೆರಳದಂತೆ ಹಾಗೂ ಸಂತೆಗೆ ತೆರಳುವ ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸುವಂತೆ ಪೊಲೀಸರಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ವೆಂಕಟೇಶ್ ಹೇಳಿದರು.
ಪಟ್ಟಣದಲ್ಲಿ ಬಾಡಿಗೆ ಮನೆ ಹೊಂದಿರುವ ಕಟ್ಟಡದ ಮಾಲೀಕರ ಪೈಕಿ ಕೆಲವರು ಬಾಡಿಗೆ ಮನೆ ಎಂದು ಪಪಂಗೆ ಮಾಹಿತಿ ನೀಡಿಲ್ಲ. ತಪ್ಪು ಮಾಹಿತಿ ನೀಡಿದವರ ಕಟ್ಟಡದ ಖಾತೆಯನ್ನು ಪಪಂ 6 ವರ್ಷಗಳ ಕಾಲ ನಿಷೇಧಿಸುವ ಹಾಗೂ ದಂಡ ವಸೂಲಿ ಮಾಡುವ ಅಧಿಕಾರವಿದೆ. ಪಟ್ಟಣದಲ್ಲಿ 3804 ಖಾತೆ ಇದೆ. 600 ನಿವೇಶನಗಳಿವೆ. 2754 ಕಟ್ಟಡಗಳು, 450 ವಾಣಿಜ್ಯ ಮಳಿಗೆ ಕಟ್ಟಡಗಳಿವೆ. 1794 ಕುಡಿಯುವ ನೀರಿನ ನಲ್ಲಿ ಸಂಪರ್ಕವಿದೆ. ಅದರ ಪೈಕಿ 75 ವಾಣಿಜ್ಯ, 1699 ವಸತಿ, 20 ಸಾರ್ವಜನಿಕ ನಲ್ಲಿಗಳಿವೆ. ಅಂಗಡಿ, ಹೋಟೆಲ್, ಮಾರುಕಟ್ಟೆ, ಬಾರ್ ಕಟ್ಟಡಗಳಿಗೆ ನಲ್ಲಿ ಸಂಪರ್ಕ ಪಡೆದಿದ್ದರೆ ಅದು ವಾಣಿಜ್ಯ ಉದ್ದೇಶಕ್ಕೆ ಎಂದಾಗಬೇಕು. ಕೆಲವರು ತಪ್ಪು ಮಾಹಿತಿ ನೀಡಿ ಮನೆ ಸಂಪರ್ಕವನ್ನು ಪಡೆದಿದ್ದಾರೆ. ಇದರಿಂದ ಪಪಂ ಆದಾಯಕ್ಕೆ ಧಕ್ಕೆ ಉಂಟಾಗಿದೆ ಅಂಥವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು.
ಉಪಾಧ್ಯಕ್ಷ ಹೊಸಕೆರೆ ರಮೇಶ್, ಜೆ.ಬಿ.ಧರ್ಮಪಾಲ್, ಎಂ.ಎ.ಹಂಝ, ಖುರ್ಷಿದಾ ಭಾನು, ಸುಧೀರ್, ಕಮಲಮ್ಮ, ಆಶಾ, ಮನೋಜ್‌ಕುಮಾರ್, ಬಿ.ಕೆ.ಜಯಮ್ಮ, ಅಜ್ಮಲ್, ಮುಖ್ಯಾಧಿಕಾರಿ ಕಲಾವತಿ ಇತರರಿದ್ದರು.