ಮೂಡಿಗೆರೆಯಲ್ಲಿ ಎರಡನೇ ದಿನವೂ ಭರ್ಜರಿ ಮಳೆ

MDG rain
ಮೂಡಿಗೆರೆ ಕೆ.ಎಂ.ರಸ್ತೆ ಬದಿಗೆ ಹಾಕಿರುವ ಮಣ್ಣು ಮಳೆ ನೀರಿನೊಂದಿಗೆ ರಸ್ತೆ ಮೇಲೆ ಹರಿಯುತ್ತಿರುವುದು.
Published on

ಮೂಡಿಗೆರೆ: ತಾಲೂಕಿನಲ್ಲಿ ಸೋಮವಾರ ಆರಂಭವಾಗಿರುವ ಮಳೆ ಮಂಗಳವಾರವೂ ಭರ್ಜರಿಯಾಗಿ ಸುರಿದು ವಾತಾವರಣ ತಂಪಾಗಿಸುವ ಜತೆಗೆ ಕುಡಿಯುವ ನೀರಿನ ಬರ ನೀಗಿಸಿದೆ. ವಿಪರೀತ ಮಳೆಯಾದ್ದರಿಂದ ರೈತರು ಮತ್ತು ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲಿಲ್ಲ.

ಮೂಡಿಗೆರೆ: ತಾಲೂಕಿನಲ್ಲಿ ಸೋಮವಾರ ಆರಂಭವಾಗಿರುವ ಮಳೆ ಮಂಗಳವಾರವೂ ಭರ್ಜರಿಯಾಗಿ ಸುರಿದು ವಾತಾವರಣ ತಂಪಾಗಿಸುವ ಜತೆಗೆ ಕುಡಿಯುವ ನೀರಿನ ಬರ ನೀಗಿಸಿದೆ. ವಿಪರೀತ ಮಳೆಯಾದ್ದರಿಂದ ರೈತರು ಮತ್ತು ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲಿಲ್ಲ.

ಮಾರ್ಚ್‌ನಿಂದ ಪ್ರತಿವಾರ ಒಂದು ಅಥವಾ ಎರಡು ದಿನದಂತೆ ನಿರಂತರವಾಗಿ ಮಳೆಯಾಗಿದೆ. ಕಾಫಿ ಕೊಯ್ಲಿನ ನಂತರ ಬೆಳೆಗಾರರು ತೋಟಕ್ಕೆ ನೀರಾಯಿಸಬೇಕಿತ್ತು. ಕೆಲ ತೋಟದ ಮಾಲೀಕರು ಮಾತ್ರ ನೀರು ಹಾಯಿಸಿದ್ದರು. ಅದೇ ವೇಳೆ ಸುರಿದ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂವು ಅರಳಿದೆ. ಹೂವು ಅರಳಿದ 15 ದಿನದ ಬಳಿಕ ಮತ್ತೊಮ್ಮೆ ಕಾಫಿ ತೋಟಕ್ಕೆ ನೀರು ಹಾಯಿಸಬೇಕು. ಆಗಲೂ ಮಳೆಯಾದ್ದರಿಂದ ಬೆಳೆಗಾರರಿಗೆ ವರದಾನವಾಗಿದೆ. ಕಳೆದ ವರ್ಷ ಜೂನ್ ಮಧ್ಯದವರೆಗೂ ಮಳೆಯಾಗಿರಲಿಲ್ಲ. ತೋಟದ ಮಾಲೀಕರು ನದಿಯಿಂದ ನೀರಾಯಿಸುತ್ತಿದ್ದ ಕಾರಣ ಹೇಮಾವತಿ, ಜಪಾವತಿ, ಸುಣ್ಣದಹಳ್ಳ, ಸುಂಡೆಕೆರೆ ಹಳ್ಳ ಸೇರಿದಂತೆ ಎಲ್ಲ ನದಿಗಳು ಬತ್ತಿ ಹೋಗಿದ್ದವು. ಈ ಬಾರಿ ಯಾವ ನದಿಗಳೂ ಬತ್ತಿಲ್ಲ. ಈಗ ಮಳೆ ಹೆಚ್ಚಾಗಿದ್ದರಿಂದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಅಮೃತ್ ಕುಡಿಯುವ ನೀರಿನ ಯೋಜನೆಯಲ್ಲಿ ಪೈಪ್ ಅಳವಡಿಸಿದ್ದರಿಂದ ಪಟ್ಟಣದ ರಸ್ತೆಗಳಲ್ಲೇ ನೀರು ಹರಿಯುತ್ತಿದ್ದು, ಕೆಸರುಮಯವಾಗಿವೆ. ಕೆ.ಎಂ.ರಸ್ತೆ ರಾಷ್ಟ್ರೀಯ ಹೆದ್ದಾರಿ ಬದಿ ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನೀರು ಹರಿದು ಹೆದ್ದಾರಿ ಸಂಪೂರ್ಣ ಕೆಸರಾಗಿದೆ. ಹೆದ್ದಾರಿ ಬದಿಯಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿ ವಾಹನಗಳನ್ನು ಬದಿಗೆ ಸರಿಸಲು ಸಾಧ್ಯವಾಗದೆ ರಸ್ತೆಯಲ್ಲಿ ನಿಲ್ಲಿಸಿ ಖರೀದಿಗೆ ತೆರಳುವ ಕಾರಣ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದರೆ ರಾಷ್ಟ್ರೀಯ ಹೆದ್ದಾರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಬದಿಯ ಗುಂಡಿ ಮುಚ್ಚುತ್ತಿಲ್ಲ. ಮಳೆಯಿಂದ ರಸ್ತೆಯಲ್ಲಿ ಕೆಸರು ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಹೆದ್ದಾರಿ ಅಧಿಕಾರಿಗಳು ತಿರುಗಿ ನೋಡುತ್ತಿಲ್ಲ.

ಗ್ರಾಮೀಣ ಭಾಗದಲ್ಲಿ ಆರಂಭಿಕ ಮಳೆಗೆ ವಿದ್ಯುತ್ ನಿರಂತರವಾಗಿ ಕೈಕೊಡುತ್ತಿದೆ. ಸೋಮವಾರ ಮತ್ತು ಮಂಗಳವಾರ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗದೆ ಗ್ರಾಪಂಗಳು ಕೈಚೆಲ್ಲಿ ಕುಳಿತಿವೆ. ಗ್ರಾಮೀಣ ಜನ ಮಳೆ ನೀರನ್ನು ಆಶ್ರಯಿಸಬೇಕಾಗಿದೆ. ಪಟ್ಟಣದಲ್ಲಿ ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net