ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 15 ಸೇತುವೆ ನಿರ್ಮಾಣ

MDG nayana
ಮೂಡಿಗೆರೆ ಸುಶಾಂತ್ ನಗರದಲ್ಲಿ ಶಾಸಕರ ಕಚೇರಿಯನ್ನು ನಯನಾ ಮೋಟಮ್ಮ ಉದ್ಘಾಟಿಸಿದರು. ಹೊಸಕೆರೆ ರಮೇಶ್, ಕೆ.ವೆಂಕಟೇಶ್, ಸಿ.ಬಿ.ಶಂಕರ್, ಪ್ರಭಾಕರ್, ಎ.ಎಂ.ಶರೀಫ್, ಎ.ಜಿ.ಸುಬ್ರಾಯ ಗೌಡ ಇತರರಿದ್ದರು.
Published on

ಮೂಡಿಗೆರೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾವೇರಿ ಜಲ ನಿಗಮದಿಂದ 8 ಸೇತುವೆ, ವಿಶ್ವೇಶ್ವರಯ್ಯ ಜಲ ನಿಗಮದಿಂದ 5, ಪಿಡಬ್ಲುೃಡಿಯಿಂದ 10, ಒಟ್ಟು 15 ಸೇತುವೆ, 8 ಕಿರು ಸೇತುವೆಗಳು ಮಂಜೂರಾಗಿವೆ. ಕಳಸ-ಹೊರನಾಡು ಮಧ್ಯದ ಹೆಬ್ಬಾಳ ಸೇತುವೆ, ಬೊಮ್ಮೇನಹಳ್ಳಿ, ಸಿಗಡಿಮೂಲೆ ಸೇರಿ 4 ಕಡೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಉಳಿದ ಕಡೆ ಸೇತುವೆ ಮತ್ತು ಕಿರುಸೇತುವೆ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಸುಶಾಂತ್ ನಗರದಲ್ಲಿ ಶಾಸಕರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಅಮೃತ್ ಯೋಜನೆಯಲ್ಲಿ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರೊದಗಿಸಲು 19 ಕೋಟಿ ರೂ. ಮಂಜೂರಾಗಿದೆ. ಪಟ್ಟಣದ ದೊಡ್ಡಿಬೀದಿಯಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಪಟ್ಟಣದ ಎಲ್ಲ ಬಡಾವಣೆಗಳಿಗೆ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆಗೆ 36 ಕೋಟಿ ರೂ. ಮಂಜೂರಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ನಿರ್ಮಿಸಲಾಗುತ್ತಿದೆ. ಬಿಳಗುಳ ಮತ್ತು ಪಟ್ಟಣದ ಬಾಲಕಿಯರ ಪ್ರೌಢಶಾಲೆಗೆ ಕುಡಿಯುವ ನೀರಿಗೆ ಶಾಸಕರ ಅನುದಾನ ಬಳಸಿ ಬೋರ್‌ವೆಲ್ ಕೊರೆಸಲಾಗಿದೆ. 3 ಕೋಟಿ ರೂ. ಅನುದಾನವನ್ನು 70 ದೇವಸ್ಥಾನಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಇನ್ನೂ 3 ಕೋಟಿ ರೂ. ಅನುದಾನದಲ್ಲಿ 34 ಕಡೆ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ವಿಪಕ್ಷಗಳ ಆರೋಪ ಹಾಸ್ಯಾಸ್ಪದ. ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ನಡೆಯುತ್ತಿರುವ ಅಭೂತಪೂರ್ವ ಅಭಿವೃದ್ಧಿಯನ್ನು ಸಹಿಸದ ವಿಪಕ್ಷಗಳು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ಸಾರ್ವಜನಿಕರು ಸೊಪ್ಪು ಹಾಕುತ್ತಿಲ್ಲ ಎಂದು ಹೇಳಿದರು.

ಮೋಟಮ್ಮ, ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ ಅವರು ತಲಾ 3 ಬಾರಿ ಶಾಸಕರಾಗಿದ್ದಾರೆ. ಅವರೆಲ್ಲರೂ ಹಳೆಯ ತಾಲೂಕು ಕಚೇರಿಯಲ್ಲಿ ಶಾಸಕರ ಕಚೇರಿ ತೆರೆದಿದ್ದರು. ಅಲ್ಲಿ ಜಾಗದ ಕೊರತೆಯಿಂದ ಜನರಿಗೆ ಕಷ್ಟವಾಗಬಹುದೆಂದು ನಾನು ಅಲ್ಲಿಗೆ ಹೋಗಲಿಲ್ಲ. ಈಗ ದೊಡ್ಡದಾದ ಸುಸಜ್ಜಿತ ಕಚೇರಿ ಆರಂಭಿಸಿದ್ದೇನೆ. ಪ್ರತಿದಿನ 100 ಕಿ.ಮೀ ದೂರದಿಂದಲೂ ಜನ ಸಂಕಷ್ಟ ಹೇಳಿಕೊಂಡು ಬರುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಕಳಸ, ಕುದುರೆಮುಖ, ಹೊರನಾಡು, ಚಿಕ್ಕಮಗಳೂರು ತಾಲೂಕಿನ ಆವತಿ, ಅಂಬಳೆ, ಆಲ್ದೂರು, ವಸ್ತಾರೆ, ಮೂಡಿಗೆರೆ ತಾಲೂಕಿನ ಕಸಬಾ, ಗೋಡಿಬೀಡು, ಬಣಕಲ್, ಬಾಳೂರು ಹೋಬಳಿಗಳಿಂದ ಜನ ಅಹವಾಲು ಸಲ್ಲಿಸಲು ಬರುತ್ತಾರೆ. ನಾನು ಕ್ಷೇತ್ರ ಪ್ರವಾಸದಲ್ಲಿದ್ದಾಗ ಆಪ್ತ ಸಹಾಯಕರ ಬಳಿ ಅಹವಾಲು ಸಲ್ಲಿಸಬಹುದಾಗಿದೆ. ಜನರ ಅಹವಾಲುಗಳನ್ನು ನಿರ್ಲಕ್ಷಿಸದೆ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್‌ಕುಮಾರ್, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಕೆ.ವೆಂಕಟೇಶ್, ಆಜ್ಮಲ್, ಸಿ.ಬಿ.ಶಂಕರ್, ತಾಪಂ ಮಾಜಿ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ, ಜಿಪಂ ಮಾಜಿ ಸದಸ್ಯ ಪ್ರಭಾಕರ್, ಮಾಜಿ ಸದಸ್ಯ ರಫೀಕ್, ವಿನಯಕುಮಾರ್, ಎ.ಎಂ.ಶರೀಫ್, ದೀಕ್ಷಿತ್ ಕಣಚೂರು, ಕುನ್ನಳ್ಳಿ ರವಿ, ಸುರೇಂದ್ರ, ಸುರೇಶ್ ಜೈನ್, ಶಿವಕುಮಾರ್, ಮನೋಜ್, ಆಶಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net