ಮೂಡಿಗೆರೆ ರಸ್ತೆ ಬದಿ ಕಸ ಸ್ವಚ್ಛಗೊಳಿಸಿದ ಪುರಸಭೆ

3blrp1.
Published on

ಬೇಲೂರು: ಪಟ್ಟಣದ ಬೇಲೂರು-ಮೂಡಿಗೆರೆ ರಸ್ತೆಯ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಮುಂಭಾಗದ ರಸ್ತೆ ಸಂಪೂರ್ಣ ಕಸಮಯವಾಗಿದ್ದು ಈ ಬಗ್ಗೆ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಫೆ.3ರಂದು ‘ಮೂಡಿಗೆರೆ ರಸ್ತೆ ಬದಿಯಲ್ಲಿ ಕಸದ ರಾಶಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿಯೊಂದಿಗೆ ಸ್ವಚ್ಛಗೊಳಿಸಿದ್ದಾರೆ.

ಬೇಲೂರು-ಮೂಡಿಗೆರೆ ರಸ್ತೆ ಸ್ವಚ್ಛಗೊಳಿಸುವ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಪತ್ರಿಕೆಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಮತ್ತು ಅಶುಚಿತ್ವಕ್ಕೆ ಕಾರಣವಾಗುವ ವಸ್ತುಗಳನ್ನು ತಂದು ಸುರಿಯುತ್ತಿರುವ ಬಗ್ಗೆ ವರದಿ ಮೂಲಕ ನಮ್ಮ ಗಮನ ಸೆಳೆದಿದ್ದರಿಂದ ನಮ್ಮ ಸಿಬ್ಬಂದಿಯೊಂದಿಗೆ ತೆರಳಿ ಸ್ವಚ್ಛತಾ ಕಾರ್ಯ ಮಾಡಿಸಲಾಗುತ್ತಿದೆ. ಈಗಾಗಲೇ ಸ್ವಚ್ಛತಾ ಅಭಿಯಾನದಡಿ ಪುರಸಭೆ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.

ಜತೆಯಲ್ಲಿ ಎಲ್ಲೆಂದರಲ್ಲಿ ಕಸ ಹಾಕದೆ, ಅಂಗಡಿ ಮುಂಗಟ್ಟು ಹಾಗೂ ಮನೆ ಮುಂದೆ ಬರುವ ಆಟೋ ಟಿಪ್ಪರ್‌ಗಳಲ್ಲೇ ಒಣ ಮತ್ತು ಹಸಿ ಕಸ ಬೇರ್ಪಡಿಸಿ ಹಾಕುವಂತೆ ತಿಳಿಸಲಾಗಿದೆ. ಆದರೂ ಕೆಲವರು ಯಾರೂ ಇಲ್ಲದ ಸಮಯದಲ್ಲಿ ತಂದು ಹಾಕುತ್ತಿದ್ದಾರೆ. ತ್ಯಾಜ್ಯವೆಲ್ಲ ಕೊಳೆತು ಸೊಳ್ಳೆಗಳ ಉತ್ಪತ್ತಿಯಾಗಿ ರೋಗರುಜಿನಗಳು ಹರಡಲು ಕಾರಣವಾಗುತ್ತದೆ. ಆದ್ದರಿಂದ ಈಗಾಗಲೇ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕದಂತೆ ಕೆಲವೆಡೆ ನಾಮಫಲಕ ಅಳವಡಿಸಿ ಸಿಸಿ ಕ್ಯಾಮರಾ ಹಾಕಿದ್ದೇವೆ. ಕೆಲವರಿಗೆ ದಂಡ ಸಹ ವಿಧಿಸಿದ್ದೇವೆ. ಆದರೂ ಇನ್ನೂ ಕೆಲವರು ಗ್ರಾಮಾಂತರದಿಂದ ಬರುವವರು ವಾಹನದಲ್ಲಿ ಯಾರಿಗೂ ಗೊತ್ತಾಗದಂತೆ ಬೇರೆಡೆಯಿಂದ ಕಸ ತಂದು ಹಾಕುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಆದ್ದರಿಂದ ಸಾರ್ವಜನಿಕರು ಯಾರೂ ಎಲ್ಲೆಂದರಲ್ಲಿ ಕಸ ಹಾಕದೆ ಪುರಸಭೆಯೊಂದಿಗೆ ಕೈಜೋಡಿಸಿ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಕರಿಸಬೇಕು ಎಂದರು. ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net