

ಮೂಡಿಗೆರೆ: ಹೆಸಗಲ್ ಮತ್ತು ಹಳೇ ಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮಗಳನ್ನು ಸೇರ್ಪಡೆಗೊಳಿಸಿ ಮೂಡಿಗೆರೆ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಮಾಡಲು ತಯಾರಿ ನಡೆದಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಹೆಸಗಲ್ ಗ್ರಾಪಂ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಕಳಸ ತಾಲೂಕು ರಚನೆಯಾಗಿ 6 ವರ್ಷ ಕಳೆದಿದೆ. ತಾಲೂಕು ಇದುವರೆಗೂ ಪೂರ್ತಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಮೂಡಿಗೆರೆ ಪಪಂ ಪುರಸಭೆಯಾದರೆ ಕಾರ್ಯರೂಪಕ್ಕೆ ಬರುವುದು ತಡವಾಗುತ್ತದೆ ಎಂದರು.
ಗ್ರಾಪಂ ಜನಪ್ರತಿನಿಧಿಗಳ ಅವಧಿ ನವೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬೇಕಾಗಿದೆ. ಅಷ್ಟರಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. 20 ವರ್ಷದಿಂದ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡದೆ ಸಮಸ್ಯೆ ಉಂಟಾಗಿತ್ತು. ಈ ಬಾರಿ ಬಹುತೇಕ ಕಡೆ ನಿವೇಶನ ಹಂಚಿಕೆ ಮಾಡಲಾಗಿದೆ. ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ 19 ಎಕರೆ ಜಾಗ ಗುರುತಿಸಲಾಗಿದೆ. ಅದರಲ್ಲಿ ನಿವೇಶನಕ್ಕೆಂದು 5 ಎಕರೆ, ಪಟ್ಟಣ ಪಂಚಾಯಿತಿಗೆ 5 ಎಕರೆ, ಮುಸ್ಲಿಂ ಸ್ಮಶಾನಕ್ಕೆ 1 ಎಕರೆ, ಎಸ್ಟಿಪಿಗೆ 5 ಎಕರೆ ಮೀಸಲಿರಿಸಲಾಗಿದೆ. ನಂದಿಪುರ ಗ್ರಾಪಂನಲ್ಲಿ 3.36 ಎಕರೆ ಜಾಗದಲ್ಲಿ ನಿವೇಶನ ಮಾಡಲಾಗಿದೆ. ಹೆಸಗಲ್ ಗ್ರಾಪಂನಲ್ಲಿ 484 ಮಂದಿ ನಿವೇಶನ ರಹಿತರಿದ್ದಾರೆ. ಅವರಿಗೆ ನಿವೇಶನ ಹಂಚಿಕೆ ಮಾಡಲು 5 ಎಕರೆ ಜಾಗ ಸಾಲದು. ನಂದಿಪುರದಲ್ಲಿ ಹೆಚ್ಚುವರಿಯಾಗಿರುವ 5 ಎಕರೆ ಜಾಗದಲ್ಲಿ ಹೆಸಗಲ್ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ನಿವೇಶನ ನೀಡಲು ತಯಾರಿ ನಡೆಸಿದಾಗ, ಹೆಸಗಲ್ನಿಂದ ನಂದಿಪುರಕ್ಕೆ ಫಲಾನುಭವಿಗಳು ಹೋಗಲು ತಯಾರಿಲ್ಲ ಎಂದು ತಿಳಿಸಿದರು.
ನಾನು ಶಾಸಕಿಯಾದ ಬಳಿಕ ಕಾರ್ಪೋರೇಟ್ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಗ್ರಾಪಂ ಕಟ್ಟಡಗಳು ಕೂಡ ಕಾರ್ಪೋರೇಟ್ ಕಚೇರಿಗೆ ಹೋಲುವ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಮಾಡಿಕೊಡಲು ಬೇಜವಾಬ್ದಾರಿ ತೋರಿಸುತ್ತಿರುವ ದೂರುಗಳು ಬರುತ್ತಿವೆ. ಸರ್ಕಾರ ಮತ್ತು ಜನರ ಮಧ್ಯದಲ್ಲಿ ಜನಪ್ರತಿನಿಧಿಗಳು ಸೇತುವೆಯಾಗಿದ್ದಾರೆ. ಜನರ ಸಮಸ್ಯೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದರು.
ನನ್ನ ಮನೆ ಹೆಸಗಲ್ ಗ್ರಾಪಂ ವ್ಯಾಪ್ತಿಯ ಸುಶಾಂತನಗರ ಬಡಾವಣೆಯಲ್ಲಿದೆ. ಬಡಾವಣೆಯಲ್ಲಿ ಚರಂಡಿ, ಬೀದಿದೀಪ ದುರಸ್ತಿ, ಗಿಡಗಂಟಿಗಳನ್ನು ಕತ್ತರಿಸಿ ತೆರವುಗೊಳಿಸಲು ನಿವಾಸಿಗಳು ಆಗಾಗ ನನ್ನಲ್ಲಿ ಕೇಳಿಕೊಳ್ಳುತ್ತಾರೆ. ನಾನು ಹೆಸಗಲ್ ಪಿಡಿಒಗೆ ಕರೆ ಮಾಡಿ ತಿಳಿಸಿದರೆ, ಸುಶಾಂತ್ ನಗರ ಬಡಾವಣೆಯ ಗ್ರಾಪಂ ಸದಸ್ಯರು ಒಪ್ಪಿಗೆ ನೀಡಿದರೆ ಗ್ರಾಪಂ ಹಣ ಬಳಸಿ ಬಡಾವಣೆಯ ಅಭಿವೃದ್ಧಿ ಕೆಲಸವನ್ನು ನಿರ್ವಹಿಸುವುದಾಗಿ ಹೇಳಿದರು. ಗ್ರಾಪಂ ಸದಸ್ಯರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಗ್ರಾಪಂ ಕಚೇರಿಯ ಫಲಕದಲ್ಲಿ ಹೆಸರಿಗಾಗಿ ಕೆಲವರು ರಾಜಕೀಯ ಮಾಡುತ್ತಾರೆ. ಅಂಥ ರಾಜಕೀಯ ಮಾಡದೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದರೆ ಜನರೇ ಗುರುತಿಸುತ್ತಾರೆ. ಅಂಥ ಕೆಲಸದಲ್ಲಿ ಎಲ್ಲ ಗ್ರಾಪಂ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಮ್, ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಗ್ರಾಪಂ ಅಧ್ಯಕ್ಷೆ ನಜ್ಮಾ ಬೇಗಂ, ಉಪಾಧ್ಯಕ್ಷ ಆದರ್ಶ, ಸದಸ್ಯರಾದ ಬಿ.ಸಿ.ಪ್ರಜಾವತಿ, ಬಿ.ಎನ್.ರಾಧಾ, ಸತ್ಯವತಿ, ಬಿ.ಎಲ್.ನಂದ, ಹಾಲಮ್ಮ, ಶಿವಣ್ಣ, ಆಶಾ, ಅರವಿಂದ, ಶ್ವೇತಾ, ಖಲೀಮುಲ್ಲಾ, ಅಖಿಲಾ, ಪೂರ್ಣೇಶ್, ಚಂದ್ರಶೇಖರ್, ಸುಧಾ, ಎಚ್.ಎಲ್.ಪ್ರಶಾಂತ್, ಹಳೇ ಮೂಡಿಗೆರೆ ಗ್ರಾಪಂ ಅಧ್ಯಕ್ಷೆ ಡಿ.ರಂಜಿತಾ, ತಾಪಂ ಇಒ ದಯಾವತಿ, ಪಿಡಿಒ ಸೌಮ್ಯಾ, ತಾಪಂ ಮಾಜಿ ಅಧ್ಯಕ್ಷ ಕೆ.ಸಿ.ರತನ್ ಇತರರಿದ್ದರು.