

ಮೂಡಿಗೆರೆ: ಭಾರಿ ಕುತೂಹಲ ಕೆರಳಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಶನಿವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೆ.ವೆಂಕಟೇಶ್ ಆಯ್ಕೆಯಾಗಿದ್ದಾರೆ. ಇದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಬಿಜೆಪಿ ಸದಸ್ಯೆ ಆಶಾ ಮೋಹನ್ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸೇರಿ 6 ಮತ ಚಲಾವಣೆಯಾಗಿದೆ. ಕಳೆದವಾರ ಕುಂಭಮೇಳಕ್ಕೆ ತೆರಳಿದ್ದ ಬಿಜೆಪಿ ಸದಸ್ಯ ಪಿ.ಜಿ.ಅನುಕುಮಾರ್ ಅವರ ಗೈರಿನಿಂದ ಬಿಜೆಪಿಗೆ 6 ಮತ ಮಾತ್ರ ಚಲಾವಣೆಯಾಯಿತು. ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಅವರಿಗೆ ಶಾಸಕಿ ನಯನಾ ಮೋಟಮ್ಮ ಸೇರಿ 7 ಮತ ಚಲಾವಣೆಯಾಗಿದೆ. 11 ಸದಸ್ಯ ಬಲದ ಪಪಂನಲ್ಲಿ ಕಾಂಗ್ರೆಸ್ 6, ಬಿಜೆಪಿ 5 ಸದಸ್ಯರನ್ನು ಹೊಂದಿದೆ.
ಕಳೆದ ಬಾರಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಚಿಕ್ಕಮಗಳೂರು ನಗರಸಭೆಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದರಿಂದ ಮೂಡಿಗೆರೆ ಪಪಂನಲ್ಲಿ ಅವರಿಗೆ ಮತ ಚಲಾವಣೆಗೆ ಅವಕಾಶ ಇರಲಿಲ್ಲ. ಹಾಗಾಗಿ ಸಂಸದರು ಸೇರಿ ಬಿಜೆಪಿ 6 ಮತ ಇದ್ದಿದರಿಂದ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿರಲಿಲ್ಲ.
ಕಾಂಗ್ರೆಸ್‌ನಲ್ಲಿ ನಡೆದ ಆಂತರಿಕ ಒಪ್ಪಂದದಂತೆ 5 ತಿಂಗಳ ಅವಧಿಯ ಅಧಿಕಾರ ಪೂರ್ಣಗೊಳಿಸಿದ್ದ ಗೀತಾ ರಂಜನ್ ಅಜಿತ್‌ಕುಮಾರ್ ರಾಜೀನಾಮೆ ನೀಡಿದಾಗ, ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ನಗರಸಭೆಗೆ ಮತ ಚಲಾಯಿಸಿ 6 ತಿಂಗಳು ಕಳೆದ ನಂತರ ಮೂಡಿಗೆರೆ ಪಪಂನಲ್ಲಿ ಮತದಾನದ ಹಕ್ಕು ಪಡೆದಿದ್ದಾರೆ. ಪಿ.ಜಿ.ಅನುಕುಮಾರ್ ಗೈರಿನಿಂದ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು. ಇದರಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತಲಾ 7 ಮತದ ಸಮಬಲ ಇದ್ದರೂ ಕಾಂಗ್ರೆಸ್ ಮುಖಂಡರು ಗೆಲವು ಪಡೆಯುವ ಅತಿಯಾದ ವಿಶ್ವಾಸದಲ್ಲಿದ್ದರು. ಅದು ಚುನಾವಣೆಯಲ್ಲಿ ನಿಜವಾಗಿದೆ. ಬಿಜೆಪಿ ಸದಸ್ಯ ಪಿ.ಜಿ.ಅನುಕುಮಾರ್ ಕೊನೇ ಕ್ಷಣದಲ್ಲಿ ಕೈಕೊಡುವುದು ಕಾಂಗ್ರೆಸಿಗರಿಗೆ ಮೊದಲೇ ತಿಳಿದಂತಿತ್ತು. ಬಿಜೆಪಿ ಮುಖಂಡರು ಮಾತ್ರ ಅಧ್ಯಕ್ಷರ ಚುನಾವಣೆ ನಡೆಯುವ ಕೊನೇ ಕ್ಷಣದವರೆಗೂ ಪಿ.ಜಿ.ಅನುಕುಮಾರ್ ಅವರನ್ನು ಸಂಪರ್ಕಿಸಲು ಹರಸಾಹಸಪಟ್ಟಿದ್ದಾರೆ. ಅವರು ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ಅಂತಿಮ ಕ್ಷಣದಲ್ಲಿ ಗೆಲುವು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ಗಮನಕ್ಕೆ ಬಂದಾಗಲೂ ಕೈಚೆಲ್ಲದೆ ಮತ ಚಲಾವಣೆಯಲ್ಲಿ ಭಾಗವಹಿಸಿ ನಿರೀಕ್ಷೆಯಂತೆ ಸೋಲು ಕಂಡ ಬಳಿಕ ಜಯಗಳಿಸಿದ ಅಭ್ಯರ್ಥಿಯನ್ನು ಅಭಿನಂದಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಂ.ಕೆ.ಪ್ರಾಣೇಶ್ ಸೇರಿದಂತೆ ನಾಲ್ವರು ಸದಸ್ಯರು ಪಪಂ ಕಚೇರಿಯಿಂದ ಹೊರಹೋದರು.