ಮೂಡಿಗೆರೆ, ಕಳಸ ಕ್ಷಯಮುಕ್ತಗೊಳಿಸುವ ಗುರಿ

MDG tb
ಮೂಡಿಗೆರೆ ತಾಲೂಕಿನ ಹೊಸಪುರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಕ್ಷಯದ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಪ್ರದೀಪ್, ತಿರುಮಲೇಶ್, ಸುರೇಶ್ ಇತರರಿದ್ದರು.
Published on

ಮೂಡಿಗೆರೆ: ಕ್ಷಯ ನಿರ್ಮೂಲನೆಗೆ ಗ್ರಾಪಂ, ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು 100 ದಿನದ ಆಂದೋಲನ ಹಮ್ಮಿಕೊಳ್ಳಲಾಗಿದೆ. ಮೂಡಿಗೆರೆ ಮತ್ತು ಕಳಸ ತಾಲೂಕುಗಳನ್ನು ಕ್ಷಯಮುಕ್ತವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಕ್ಷಯ ಚಿಕಿತ್ಸಾ ಮೇಲ್ವಿಚಾರಕ ಪ್ರದೀಪ್ ಹೇಳಿದರು.

ಹೊಸಪುರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಶುಕ್ರವಾರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಡಿ.7ರಂದು ಆಂದೋಲನ ಆರಂಭವಾಗಿದ್ದು, 24ರವರೆಗೆ ನಡೆಯಲಿದೆ. ಕ್ಷಯಕ್ಕೆ ಚಿಕಿತ್ಸೆ ನೀಡುವ ವಿಧಾನ ಮತ್ತು ಎಚ್ಚರಿಕೆ ಕ್ರಮದ ಅರಿವು ಮೂಡಿಸಲಾಗುವುದು ಎಂದರು.

ಮೂಡಿಗೆರೆ ತಾಲೂಕಿನ 23, ಕಳಸ ತಾಲೂಕಿನ 6 ಗ್ರಾಪಂಗಳಲ್ಲಿ ಕ್ಷಯಮುಕ್ತಗೊಳ್ಳುವಂಥ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಫಲವಾಗಿ 14 ಗ್ರಾಪಂಗಳು ಕ್ಷಯಮುಕ್ತಗೊಂಡಿವೆ. ಕ್ಷಯ ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. 2024ರಲ್ಲಿ ಮೂಡಿಗೆರೆ ತಾಲೂಕಿನಲ್ಲಿ 96 ಕ್ಷಯ ರೋಗಿಗಳು ಪತ್ತೆಯಾಗಿದ್ದರು. ಅದರಲ್ಲಿ 54 ರೋಗಿಗಳು ಗುಣಮುಖರಾಗಿದ್ದಾರೆ. 6 ಮಂದಿ ಮರಣ ಹೊಂದಿದ್ದಾರೆ. 36 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಾರಿ ದುರ್ಬಲ ವರ್ಗದವರನ್ನು ತಪಾಸಣೆ ಮಾಡಲಾಗುತ್ತದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ ಅವರ ಮಧುಮೇಹ ತಪಾಸಣೆ ನಡೆಸಲಾಗುವುದು. ಹಿರಿಯ ನಾಗರಿಕರ ಸಂಪರ್ಕದಲ್ಲಿರುವ 5 ವರ್ಷ ಹಿಂದಿನ ಕ್ಷಯ ರೋಗಿಗಳು, ಗುಂಪಾಗಿ ವಾಸ ಮಾಡುವವರನ್ನು ಕೂಡ ತಪಾಸಣೆ ಮಾಡಲಾಗುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ, ಹಸಿವಾಗದೆ ಇರುವುದು, ತೂಕದಲ್ಲಿ ಇಳಿಕೆ, ರಾತ್ರಿ ಬೆವರುವುದು, ಕಫದಲ್ಲಿ ರಕ್ತದ ಕಣಗಳಿರುವುದು, ಎದೆನೋವು ಕಾಣಿಸಿಕೊಂಡವರಿಗೆ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ರೋಗದ ಲಕ್ಷಣಗಳು ಕಂಡುಬಂದರೆ ತಾಲೂಕು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಮೇಲ್ವಿಚಾರಕ ತಿರುಮಲೇಶ್, ಆರೋಗ್ಯ ಇಲಾಖೆ ಸಮುದಾಯ ಆರೋಗ್ಯಾಧಿಕಾರಿ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net