

ಮಳವಳ್ಳಿ: ತಾಲೂಕಿನ ಮೂಗನಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು.
ಶಾಲೆಯಲ್ಲಿ ಹತ್ತು ಮಕ್ಕಳಿದ್ದು, ಶ್ರೀಕೃಷ್ಣ ಹಾಗೂ ರಾಧೆ ವೇಷ ತೊಡಿಸಿ ಕಳುಹಿಸುವಂತೆ ಶಿಕ್ಷಕಿ ಸುಮಲತಾ ಪಾಲಕರ ಮನವೊಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳು ಬಾಲಗೋಪಾಲ ಹಾಗೂ ರಾಧೆ ವೇಷ ತೊಟ್ಟು ಶಾಲೆಗೆ ಆಗಮಿಸಿದ್ದರು. ಇದೇ ವೇಳೆ ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾದರು. ಕಾರ್ಯಕ್ರಮವನ್ನು ವೀಕ್ಷಿಸಿದ ಪಾಲಕರು ಸಂಭ್ರಮಿಸಿದರು.
ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ನಾಗೇಂದ್ರಮೂರ್ತಿ ಮಾತನಾಡಿ, ಉತ್ತಮ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳಿಗೆ ಧಾರ್ಮಿಕ ಸಂಸ್ಕೃತಿಯನ್ನು ಪರಿಚಯಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.