ಮೂಖಹಳ್ಳಿ ಸುತ್ತ ಮುತ್ತ ಹುಲಿ ಓಡಾಟ

21-APR-GPT-2
Published on

ಗುಂಡ್ಲುಪೇಟೆ: ತಾಲೂಕಿನ ಮೂಖಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಶೆಟ್ಟರ ಹುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಜನ, ಜಾನುವಾರುಗಳು ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ದೇವರ ಕೆರೆ ಮತ್ತು ಮೂಖಹಳ್ಳಿ ವ್ಯಾಪ್ತಿಯಲ್ಲಿ ಹೆಣ್ಣು ಹುಲಿ ಮತ್ತು ಎರಡು ಮರಿಗಳು ಸುತ್ತಾಟ ನಡೆಸುತ್ತಿರುವುದು ಪದೇ ಪದೇ ಜನರ ಕಣ್ಣಿಗೆ ಬೀಳುತ್ತಿದೆ. ಇತ್ತೀಚೆಗೆ ಗ್ರಾಮದ ರಾಜು ಎಂಬುವರ ಜಮೀನಿನ ಸಮೀಪ ಕಾಡು ಹಂದಿಯ ಮೇಲೆ ದಾಳಿ ಮಾಡಿ ಅದನ್ನು ಅರ್ಧಂಬರ್ಧ ತಿಂದು ಹುಲಿಗಳು ಕಣ್ಮರೆಯಾಗಿರುವುದು ಸುತ್ತಲಿನ ಜಮೀನುಗಳ ರೈತರ ಭೀತಿಗೆ ಕಾರಣವಾಗಿದ್ದು, ಜಮೀನುಗಳಿಗೆ ಹೋಗಲು ಹೆದರುತ್ತಿದ್ದಾರೆ.

ಈ ಬಗ್ಗೆ ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಜೆ ಐದು ಗಂಟೆಯಾಗುತ್ತಿದ್ದಂತೆ ಹೊಲಕ್ಕೆ ಹೋಗಲು ಭಯಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ದನ-ಕರುಗಳನ್ನು ಮೇಯಿಸಲು ಭಯವಾಗುತ್ತಿದ್ದು, ಯಾವ ಸಂದರ್ಭದಲ್ಲಿ ಹುಲಿ ದಾಳಿಯಾಗುತ್ತದೆಯೋ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದೇವೆ ಎಂದು ಹೊನ್ನಶೆಟ್ಟರ ಹುಂಡಿ ಗ್ರಾಮದ ರೈತ ಮಹೇಶ್ ಹೇಳಿದ್ದಾರೆ.

ಇನ್ನಾದರೂ ಅರಣ್ಯ ಇಲಾಖೆ ಗ್ರಾಮದ ಸುತ್ತಮುತ್ತ ಸುಳಿದಾಡುತ್ತಿರುವ ಹುಲಿಗಳನ್ನು ಸೆರೆಹಿಡಿಯಬೇಕು. ಇಲ್ಲವೇ ಕಾಡಿಗಟ್ಟುವ ಮೂಲಕ ರೈತರಿಗೆ ನೆಮ್ಮದಿ ದೊರಕಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net