ಮೂಕನಾಗಬೇಕು ಕಿರುಚಿತ್ರ ಶೀಘ್ರ ತೆರೆಗೆ

The short film should be muted soon
ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ಮೂಕನಾಗಬೇಕು ಕಿರುಚಿತ್ರದ ನಿರ್ದೇಶಕ ಶಿವಾನಂದ ಹಿರೇಮಠ ಸುದ್ದಿಗೋಷ್ಠಿ ನಡೆಸಿದರು. ನಿರ್ಮಾಪಕ ಡಾ. ರಾಜು ನಾಯ್ಕರ್, ಬಾಬು ರಾಜೇಂದ್ರ ನಾಯ್ಕ ಮತ್ತಿತರರಿದ್ದಾರೆ.
Published on

ವಿಜಯಪುರ: ಕಡಕೋಳ ಮಡಿವಾಳಪ್ಪನವರ ಜೀವನ ಹಾಗೂ ತತ್ವಾದರ್ಶಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ‘ಮೂಕನಾಗಬೇಕು’ ಎಂಬ ಕಿರುಚಿತ್ರ ತಯಾರಿಸಲಾಗಿದ್ದು, ತಿಂಗಳಾಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ಶಿವಾನಂದ ಪಾಟೀಲ ತಿಳಿಸಿದರು.

ಕಡಕೋಳ ಮಡಿವಾಳಪ್ಪನವರು ಶ್ರೇಷ್ಠ ತತ್ವ ಚಿಂತಕರು. ಹದಿನೆಂಟನೇ ಶತಮಾನದಲ್ಲಿ ಆಗಿ ಹೋದ ಮಹಾನ್ ತತ್ವ ಚಿಂತಕರು. ಸಮಾಜದ ಬದಲಾವಣೆಗೆ ಸಾಕಷ್ಟು ಶ್ರಮಿಸಿದವರು. ಹೀಗಾಗಿ ಅಂಥ ಶ್ರೇಷ್ಠ ತತ್ವ ಚಿಂತಕರನ್ನು ನಾಡಿಗೆ ಪರಿಚಯಿಸಬೇಕೆಂಬ ಮಹದಾಸೆಯಿಂದ ಕಿರುಚಿತ್ರ ಸಿದ್ಧಪಡಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಂದಾಜು ನಲವತ್ತು ನಿಮಿಷಗಳ ಕಾಲಾವಧಿಯಲ್ಲಿ ಸಂಪೂರ್ಣ ವ್ಯಕ್ತಿಚಿತ್ರ ಕಟ್ಟಿಕೊಡಲಾಗಿದೆ. ಇನ್ನೂ ಸಾಕಷ್ಟು ವಿಷಯಗಳಿದ್ದು ಎರಡನೇ ಭಾಗ ತಯಾರಿಸುವ ಸಿದ್ಧತೆ ಕೂಡ ನಡೆದಿದೆ. ಚಂದನ ವಾಹಿನಿ ಚಿತ್ರ ಪ್ರಸಾರಿಸಲು ಒಪ್ಪಿಕೊಂಡಿದ್ದು ಜುಲೈ ಅಂತ್ಯಕ್ಕೆ ಪ್ರಸಾರಗೊಳ್ಳಲಿದೆ ಎಂದರು.
ನಿರ್ಮಾಪಕ ಡಾ. ರಾಜು ನಾಯ್ಕರ್ ಮಾತನಾಡಿ, ಕಡಕೋಳ ಮಡಿವಾಳಪ್ಪನವರ ಜೀವನಾಧಾರಿತ ಕಿರುಚಿತ್ರ ನಿಮಿಸುವ ಮಹತ್ಕಾರ್ಯದಲ್ಲಿ ನನ್ನದೊಂದು ಚಿಕ್ಕ ಸೇವೆ ಇದೆ ಎಂಬುದೇ ಖುಷಿಯ ವಿಚಾರ. ಆರಂಭದಲ್ಲಿ ಇಂಥದ್ದೊಂದು ಯೋಜನೆ ಮತ್ತು ಯೋಚನೆ ಪ್ರಸ್ತಾಪಗೊಂಡಾಗ ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಇದೀಗ ಚಿತ್ರ ಪೂರ್ಣಗೊಂಡು ಪ್ರಸಾರಕ್ಕೆ ದಿನಗಣನೆ ಆರಂಭಗೊಂಡಿರುವುದು ಸಂತಸ ತಂದಿದೆ ಎಂದರು.

ಡಾ. ಬಾಬು ರಾಜೇಂದ್ರ ನಾಯ್ಕ ಮಾತನಾಡಿ, ಕಡಕೋಳ ಮಡಿವಾಳಪ್ಪನವರ ಮೂಕನಾಗಬೇಕು….. ಹಾಡು ಜಗತ್ಪ್ರಸಿದ್ಧ. ಆ ಹಾಡು ಕೇಳಿಕೊಂಡೇ ನಾವೆಲ್ಲರೂ ಬೆಳೆದವರು. ಇದೀಗ ಅವರ ಜೀವನಾಧಾರಿತ ಚಿತ್ರ ನಿರ್ಮಾಣ ಮಹತ್ವದ ಕಾರ್ಯ. ಚಿತ್ರತಂಡಕ್ಕೆ ಪ್ರೋತ್ಸಾಹ ಸಿಗಲಿ ಎಂದರು.

ಪತ್ರಕರ್ತ ಶ್ರೀಶೈಲ ಬಿರಾದಾರ ಕಿರುಚಿತ್ರದ ವಿವರ ನೀಡಿದರು. ಖ್ಯಾತ ಕಲಾವಿದ ಸಂತೋಷ ಉಪ್ಪಿನ, ನಟಿ ಸುಕನ್ಯಾ, ಗುರುರಾಜ ಮಠ, ಭೋಜರಾಜ ದೇಸಾಯಿ, ರವೀಂದ್ರ ಮಲ್ಲೇದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net