

ಹಾಸನ : ಪಶು ವೈದ್ಯಕೀಯ ಶಿಕ್ಷಣ ಪಡೆದು ಕೆಲಸ ಮಾಡುವುದೆಂದರೆ ಕಷ್ಟದ ಕೆಲಸ. ಅದರಲ್ಲೂ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ಕೊಡುವುದೆಂದರೇ ಇನ್ನೂ ಕಷ್ಟ. ಇಂತಹ ಪವಿತ್ರ ಕೆಲಸ ಮಾಡಲು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇವಾ ಮನೋಭಾವದಲ್ಲಿ ಕೆಲಸ ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಆರ್. ಪೂರ್ಣಿಮಾ ಅವರು ಸಲಹೆ ನೀಡಿದರು.
ನಗರದ ಚಿಕ್ಕಕೊಂಡಗುಳದ ಬಳಿ ಇರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಗೋಕುಲ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶುವೈದ್ಯಕೀಯ ಸಂಘ, ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ‘ಪಶು ವೈದ್ಯಕೀಯ ವೃತ್ತಿಯಲ್ಲಿ ವೈವಿಧ್ಯತೆ ಸಮಾನತೆ ಮತ್ತು ಒಳಗೊಳ್ಳುವಿಕೆ’ ಎನ್ನುವ ಘೋಷವಾಕ್ಯದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಣಿಗಳ ನೋವು ಅರಿತು ಕೆಲಸ ಮಾಡುವುದು ವೈದ್ಯರ ವೈಶಿಷ್ಟತೆ ತೋರಿಸುತ್ತದೆ ಎಂದರು.
ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾರೂ ಕೂಡ ಮತದಾನದಿಂದ ಹೊರಗೆ ಉಳಿಯದೆ ಕಡ್ಡಾಯ ಮತದಾನ ಮಾಡಬೇಕು. 18 ವರ್ಷ ತುಂಬಿದ ಅಂಧರು, ವೃದ್ಧರು, ಅಂಗವಿಕಲರು ಸೇರಿ ಪ್ರತಿಯೊಬ್ಬರೂ ಕೂಡ ಮತದಾನ ಮಾಡುವ ಮೂಲಕ ಹಾಸನ ಜಿಲ್ಲೆಯನ್ನು ಶೇಕಡ ನೂರರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಬರಲು ಕೈಜೋಡಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಕೆ.ಎ. ಪರಪ್ಪಸ್ವಾಮಿ ಮಾತನಾಡಿ, ಮನುಷ್ಯನ ಆರೋಗ್ಯದಂತೆ ಪಶು ಆರೋಗ್ಯ ಕೂಡ ಅಷ್ಟೇ ಮುಖ್ಯವಾಗಿದೆ. ಎರಡೂ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ರೈತರ ಬದುಕು ಹಸನವಾಗಲು, ರೈತರಿಗೆ ಉದ್ಯೋಗ ಸೃಷ್ಟಿಯಾಗಲು ಈ ಪಶು ವೈದ್ಯಕೀಯ ಕೂಡ ಮೂಲ ಕಾರಣವಾಗಿದೆ. ಹಾಗಾಗಿ ಪಶು ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ರೈತರ ಆದಾಯ ಹೆಚ್ಚಿಸುವಲ್ಲಿ ಪಶು ವೈದ್ಯಕೀಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಂ.ಸಿ. ಶಿವಕುಮಾರ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಕೂಡ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಆಚರಿಸಲಾಗುತ್ತಿದೆ. ಇದೊಂದು ಉತ್ತಮವಾದ ಶಿಕ್ಷಣವಾಗಿದ್ದು, ಮೂಕ ಪ್ರಾಣಿಗಳಿಗೆ ಸೇವೆ ಸಲ್ಲಿಸುವ ಭಾಗ್ಯ ದೊರಕಿದೆ. ಗೋವುಗಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಗ್ರಾಮಗಳಿಗೆ ತೆರಳಿ ಹಲವಾರು ಕಾರ್ಯಕ್ರಮಗಳನ್ನು ಪ್ರತಿವರ್ಷ ಏರ್ಪಡಿಸುತ್ತ ಬರಲಾಗಿದೆ. ತಾಂತ್ರಿಕ ಕಾರ್ಯಾಗಾರ ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಬೇಕು ಎಂದರು.
ಮಧ್ಯಾಹ್ನದವರೆಗೂ ಪಶು ವೈದ್ಯವೃತ್ತಿ ಸಂಬಂಧಿಸಿದ ಚರ್ಚೆಗಳನ್ನು ನಡೆಸಲಾಯಿತು. ಇದೇ ವೇಳೆ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಕೆ.ಆರ್. ರಮೇಶ್, ಪಶುಪಾಲನಾ ವೈದ್ಯಕೀಯ ಅಧಿಕಾರಿ ಡಾ. ಎಸ್. ಸುಂದರೇಶ್, ಹಿರಿಯ ಪಶುವೈದ್ಯಾಧಿಕಾರಿ ಡಾ. ಎಂ.ಆರ್. ಪ್ರವೀಣ್ ಕುಮಾರ್, ಹಾಸನ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಎಲ್. ಪ್ರಸನ್ನ ಸೇರಿ ಇತರರು ಉಪಸ್ಥಿತರಿದ್ದರು.