

ಬಳ್ಳಾರಿ:
ಜಿಲ್ಲೆಯಲ್ಲಿ ಅಶಾಂತಿ ಸೃಷ್ಡಿಸುವುದನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಮುಸ್ಲಿಮರನ್ನು ವಿರೋಧಿಸಿದರೆ ನಾವು ಸುಮ್ಮನಿರಲ್ಲ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು. ಜಿಲ್ಲೆ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರರೆಡ್ಡಿ ಬಳ್ಳಾರಿ ಇತಿಹಾಸದಲ್ಲಿ ನಡೆಯದ ಬೆಳವಣಿಗೆಗೆ ಕಾರಣರಾಗಿದ್ದಾರೆ. ನನ್ನ ಸ್ನೇಹಿತರಾದ ಶಾಸಕ ಸೋಮಶೇಖರರೆಡ್ಡಿ ವಿದ್ಯಾವಂತರಾಗಿದ್ದಾರೆ. ಆದರೆ, ಮಾತಿನ ಭರದಲ್ಲಿ ಒಂದು ಧರ್ಮದ ವಿರುದ್ಧ ತಪ್ಪು ಮಾತಾನಾಡಿದ್ದಾರೆ. ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ದೂರನ್ನು ಮುಸ್ಲಿಮರೇ ನೀಡಬೇಕೆಂದಿಲ್ಲ. ನಮ್ಮನ್ನೇ ಮುಸ್ಲಿಮರೆಂದು ತಿಳಿದುಕೊಳ್ಳಿ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೆಲ್ಲ ಬೇವಕೂಫ್ ಗಳಾ..? ಸೋಮಶೇಖರರೆಡ್ಡಿ ಹೇಳಿಕೆ ಖಂಡನೀಯ. ಸಿಎಎ ಕಾಯ್ದೆಯಲ್ಲಿರುವ ನ್ಯೂನ್ಯತೆಗಳನ್ನು ಜನರಿಗೆ ತಿಳಿಸಲಿದ್ದೇವೆ.
ಸೋಮಶೇಖರರೆಡ್ಡಿ ಹೇಳಿಕೆಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಸೋಮಶೇಖರರೆಡ್ಡಿ ಅವರನ್ನು ಬಂಧಿಸಬೇಕೆಂದು ನಮ್ಮ ಪಕ್ಷದ ಮುಖಂಡರು ಈಗಾಗಲೇ ಆಗ್ರಹಿಸಿದ್ದಾರೆ. ಪೊಲೀಸರು ಸೋಮಶೇಖರರೆಡ್ಡಿ ಅವರನ್ನು ಯಾವಾಗ ಬೇಕಾದರೂ ಬಂಧಿಸಬಹುದು. ಬಂಧಿಸುವ ನಿರೀಕ್ಷೆಯಲ್ಲಿದ್ದೇವೆ. ಶಾಸಕ ಜಮೀರ್ ಅಹ್ಮದ್ ಖಾನ್ ಬಂದರೆ ಶಾಂತಿಗೆ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು.
ಆರೋಗ್ಯ ಸಮಸ್ಯೆ ಹಾಗೂ ಇತರ ಕಾರಣಗಳಿಂದ ನಾನು ತುಂಬಾ ದಿನಗಳಿಂದ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಈ ಬಗ್ಗೆ ಕ್ಷೇತ್ರದ ಮತದಾರರಿಗೆ ತಿಳಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಶಾಸಕ ಬಿ.ನಾಗೇಂದ್ರ ತಿಳಿಸಿದರು.
ಮಾಜಿ ಎಂಎಲ್ಸಿ ನಿರಂಜನ ನಾಯ್ಡು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಹನುಮ ಕಿಶೋರ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಪಂ ಸದಸ್ಯ ಅಲ್ಲಂ ಪ್ರಶಾಂತ, ಮುಖಂಡರಾದ ಕುಡತಿನಿ ಶ್ರೀನಿವಾಸ, ಮಾನಯ್ಯ, ರಾಮಪ್ರಸಾದ್, ಕುಮಾರಸ್ವಾಮಿ, ಹುಮಾಯುನ್ ಖಾನ್, ಮುಂಡ್ರಿಗಿ ನಾಗರಾಜ ಹಾಗೂ ಇತರರಿದ್ದರು.