

ಮುಸ್ಲಿಂ ರಾಜರ ಆಳ್ವಿಕೆಯಿಂದ ನಮ್ಮ ಇತಿಹಾಸ ಮರೆಮಾಚಿದೆ ಎಂದು ಎಸ್.ವಿ. ಸಂಕನೂರು ಹೇಳಿದರು.
ಲಕ್ಕುಂಡಿ ಉತ್ಸವ ನಿಮಿತ್ಯ ಅತ್ತಿಮಬ್ಬೆ ವೇದಿಕೆಯಲ್ಲಿ ಶನಿವಾರ ಜರುಗಿದ ಇತಿಹಾಸ ವಿಚಾರಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಇತಿಹಾಸ ಶ್ರೀಮಂತವಾಗಿತ್ತು. ಕಾಲಾನಂತರ ಮುಸ್ಲಿಂರ ಆಳ್ವಿಕೆ, ದಬ್ಬಾಳಿಕೆಗೆ ಒಳಪಟ್ಟು ಕೆಲವೆ ಕೆಲವು ದೇವಸ್ಥಾನಗಳು ಉಳಿದಿವೆ. ಲಕ್ಕುಂಡಿಯಲ್ಲೂ ಈ ಮೊದಲು ನೂರೊಂದು ಬಾವಿ, ನೂರೊಂದು ದೇವಸ್ಥಾನ ಇದ್ದು, ಈ ಬೆರಳಣಿಕೆಯಷ್ಟು ಮಾತ್ರ ಉಳಿದಿವೆ. ಇತಿಹಾಸದ ಅರಿವು ಇದ್ದವರಿಗೆ ಇತಿಹಾಸ ಸೃಷ್ಟಿಸಲು ಸಾಧ್ಯ. ಡಾ. ಬಿ.ಆರ್.ಅಂಬೇಡ್ಕರ್ ಈ ಮಾತನ್ನು ಹೇಳಿದ್ದರು. ನಮ್ಮ ಇತಿಹಾಸ ಬಗ್ಗೆ ನಾವು ಅರಿಯುವುದು ತಿಳಿಯುವುದು ಅತ್ಯಗತ್ಯ ಇದೆ. ಇತಿಹಾಸ, ಚಿಂತನೆ, ವಿಚಾರ ಗೋಷ್ಠಿಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸುವುದು ಯೋಗ್ಯ. ಜಿಲ್ಲಾಡಳಿತದಿಂದ ಇಂತಹ ಕಾರ್ಯಗಳು ಜಿಲ್ಲಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಹಂಪಿ ವಿವಿ ಪುರಾತತ್ವ ವಿಭಾಗದ ಪ್ರೊ. ಎಸ್.ವೈ. ಸೋಮಶೇಖರ್ ಮಾತನಾಡಿ, ಆದಿ ಮಾನವನ ಅಲೆದಾಟದಿಂದ ಇಂದಿನ ಉದೇಶಿತ ಸಂಚಾರವನ್ನು ಪ್ರವಾಸೋದ್ಯಮ ಎನ್ನಬಹುದು. ಪ್ರವಾಸೋದ್ಯಮವು ಇಂದು ಕಾರ್ಪೋರೇಟ್ ವಲಯಕ್ಕೆ ಕಾಲಿಟ್ಟಿದೆ. ಅನೇಕ ದೇಶದ ಮೂಲ ಆರ್ಥಿಕ ಆದಾಯ ಪ್ರವಾಸೋದ್ಯಮ ಎಂಬುದು ಗಮನಾರ್ಹ. ಈ ಹಿನ್ನೆಲೆ ಲಕ್ಕುಂಡಿಯಲ್ಲಿ ಪ್ರವಾಸೋದ್ಯಮ ಹಬ್ ಮಾಡುವ ಅಗತ್ಯತೆ ಇದೆ. 5000 ಸಾವಿರ ವರ್ಷಗಳ ಹಿಂದೆಯೇ ಲಕ್ಕುಂಡಿ ಅಸ್ತಿತ್ವದಲ್ಲಿ ಇತ್ತು ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ 'ಒಂದು ರಾಜ್ಯ ಹಲವು ಜಗತ್ತು' ಎಂಬ ಸ್ಲೋಗನ್ ದೊಂದಿಗೆ ವಿವಿಧ ತಾಣಗಳ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದೆ. ಈ ಹಿನ್ನೆಲೆ ಲಕ್ಕುಂಡಿಗೆ ಒಳಬರುವ ರಾಜ್ಯ ಹೆದ್ದಾರಿಗಳಲ್ಲಿ ಲಕ್ಕುಂಡಿ ಮಾಹಿತಿ ಇರುವ ನಾಮ ಫಲಕಗಳನ್ನು ಅಳವಡಿಸುವ ಕಾರ್ಯ ಜಿಲ್ಲಾಡಳಿತ ಮಾಡಲಿದೆ. ಈ ಜಾಗೃತಿ ಸ್ಥಳದ ಬಗ್ಗೆ ಅರಿವು ಎಲ್ಲರಲ್ಲೂ ನೂಡಬೇಕಿದೆ ಎಂದರು.
ಇತಿಹಾಸ ತಜ್ಞ ಅಪ್ಪಣ್ಣ ಹಂಜೆ ಮಾತನಾಡಿ, ಲಕ್ಕುಂಡಿ ಇತಿಹಾಸದಲ್ಲಿ ಹುದಗಿಹೋದ ವೈಷ್ಣವ ಮತ್ತು ಜೈನ ಪರಂಪರೆ, 6 ನೇ ಶತಮಾನದಲ್ಲಿ ಲಕ್ಕುಂಡಿಯ ವೈಭವ ಕುರಿತು ಮಾತನಾಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಡಿಡಿಪಿಐ ಬಸಲಿಂಗಪ್ಪ, ದತ್ತ ಪ್ರಸನ್ನ ಪಾಟೀಲ ಇತರರು ಇದ್ದರು.
ಫೋಟೋ…
ಗದಗ ಜಿಲ್ಲೆಯ ಲಕ್ಕುಂಡಿ ಉತ್ಸವದ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಶನಿವಾರ ಜರುಗಿದ ಇತಿಹಾಸ ಗೋಷ್ಠಿಯಲ್ಲಿ ಇತಿಹಾಸ ತಜ್ಞ ಅಪ್ಪಣ್ಣ ಹಂಜೆ ಮಾತನಾಡಿದರು. ವೈಶಾಲಿ ಎಂ.ಎಲ್, ಸುಶೀಲಾ ಬಿ, ಎಸ್.ವಿ. ಸಂಕನೂರು ಇತರರು ಇದ್ದರು