

ಆಲೂರು: ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಬಿತ್ತನೆ ಮಾಡಿರುವ ಮಳೆ ಆಶ್ರಯದ ಮುಸುಕಿನ ಜೋಳದ ಬೆಳೆ ಕೀಟಬಾಧೆಗೆ ಸಿಲುಕಿದ್ದು, ಹೆಚ್ಚು ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ಮೇ ಅಂತ್ಯ ಹಾಗೂ ಜೂನ್ ತಿಂಗಳ ಪ್ರಾರಂಭದಲ್ಲಿ ಬಿತ್ತನೆಯಾಗಿರುವ ಮುಸುಕಿನ ಜೋಳದ ಬೆಳೆ ಆರಂಭದಿಂದಲೂ ಮಳೆಯ ಕೊರತೆ ಇಲ್ಲದೆ ನಳನಳಿಸುತ್ತಿತ್ತು. ಆದರೆ, 55ರಿಂದ 60 ದಿನಗಳು ಕಳೆದಿರುವ ಫಸಲು ಕೈ ಹಿಡಿಯುವ ಹಂತ ಸಮೀಪಿಸಿರುವ ವೇಳೆ ಹುಳುವಿನ ದಾಳಿಗೆ ಸಿಲುಕಿದೆ.
15 ದಿನಗಳಿಂದ ಮಳೆ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮೆಕ್ಕೆಜೋಳ ತಾಕಿನಲ್ಲಿ ಕೀಟಬಾಧೆ ಆರಂಭವಾಗಿದೆ. ಗಿಡದ ಸುಳಿಯಲ್ಲಿ ಸೇರಿದ ಹುಳು ಎಲೆಯನ್ನು ಭಕ್ಷಿಸಿ, ಸಸಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಬಿಸಿಲಿನ ಬೇಗೆಯಿಂದ ಕೊಳವೆ ಹಾಗೂ ಕೆರೆ ನೀರು ಮೇಲೆತ್ತಿ ಮುಸುಕಿನ ಜೋಳದ ಕೃಷಿಗೆ ಮುಂದಾಗಿದ್ದರು.
ತಾಲೂಕಿನ ನಾಲ್ಕು ಹೋಬಳಿಗಳಿಂದ ಒಟ್ಟು 10,400 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕಜೋಳ ಬಿತ್ತನೆ ಮಾಡಲಾಗಿದೆ. ಕಡಿಮೆ ವೆಚ್ಚ ಹಾಗೂ ಕಡಿಮೆ ನೀರು ಬೇಡುವ ಮುಸುಕಿನ ಜೋಳ ಈಗ ಕೀಟಬಾಧೆಗೆ ಸಿಲುಕಿರುವುದರಿಂದ ರೈತರು ನಲುಗಿ ಹೋಗಿದ್ದಾರೆ. ಕಳೆದ ವರ್ಷ ಕೊಯ್ಲಿನ ಅವಧಿಯಲ್ಲಿ ಲದ್ದಿ ಹುಳು ಕಾಟದಿಂದ ಪರಿತಪಿಸಿದ್ದ ರೈತರು, ಈ ಬಾರಿ ಬೆಳೆ ಉಳಿಸಿಕೊಳ್ಳಲು ಪರದಾಡಬೇಕಿದೆ. ಔಷಧೋಪಚಾರ ಮತ್ತು ನಿರ್ವಹಣೆಗೆ ಹೆಚ್ಚು ವೆಚ್ಚ ಮಾಡಬೇಕಾದ ಸ್ಥಿತಿಯೂ ತಲೆದೋರಿದೆ.