

ಹಗರೆ: ಇಲ್ಲಿನ ಮಾದೀಹಳ್ಳಿ ಹೋಬಳಿ ಕೇಶವಪುರ ಗ್ರಾಮದಲ್ಲಿ ಹುಲುಸಾಗಿ ಬೆಳೆದಿದ್ದ ಮುಸುಕಿನ ಜೋಳವನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ.
ಹಾಸನ ತಾಲೂಕು ದೊಡ್ಡಗದ್ದುವಳ್ಳಿ ಗ್ರಾಮದ ರೈತ ರಾಮೇಗೌಡ ಎಂಬುವರು ಕೇಶವಪುರ ಗ್ರಾಮದಲ್ಲಿ 2 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಮೂರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರು. ಈ ವರ್ಷವೂ ಜಮೀನನಲ್ಲಿ ಮುಸುಕಿನ ಜೋಳ ಬೆಳೆದಿದ್ದರು. ಇನ್ನೇನು ಫಸಲು ಕಟಾವು ಮಾಡಬೇಕಿತ್ತು. ಆದರೆ ಯಾರೋ ದುಷ್ಕರ್ಮಿಗಳು ದುರುದ್ದೇಶದಿಂದ ಹೊಲಕ್ಕೆ ನುಗ್ಗಿ 35 ಗುಂಟೆಯಷ್ಟು ಜೋಳದ ಬೆಳೆಯನ್ನು ಕತ್ತರಿಸಿ ನಾಶಪಡಿಸಿದ್ದಾರೆ.
ರೈತ ರಾಮೇಗೌಡ ಗ್ರಾಮದಲ್ಲಿ ಇರಲಿಲ್ಲ. ನಂತರ ಜಮೀನಿಗೆ ಹೋಗಿ ನೋಡಿದಾಗ ಬೆಳೆ ನಾಶ ಮಾಡಿರುವುದು ಕಂಡುಬಂದಿದೆ. ಬೆಳೆ ನಾಶಪಡಿಸಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ರಾಮೇಗೌಡ ಅವರು ಹತ್ತಿರದ ಸಂಬಂಧಿ ಗಿರೀಶ್ ಮತ್ತು ಆತನ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ಹಳೇಬೀಡು ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್‌ಐ ಶಿವಾನಗೌಡ ಪಾಟೀಲ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.