

ಹಾಸನ : ಮುಸಲ್ಮಾನರಿಗೆ ಧರ್ಮಾದಾರಿತವಾಗಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ನ್ಯಾಯ ಒದಗಿಸಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದರು.
ನಗರದ ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಂ ಮೀಸಲಾತಿ ರದ್ದು ಆದೇಶ ವಾಪಸ್ ಪಡೆಯೋದಾಗಿ ಕೈ ನಾಯಕರ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದ, ಅವರು ಅಧಿಕಾರಕ್ಕೆ ಬರುವುದಿಲ್ಲ ಹೇಗೆ ಆದೇಶವನ್ನು ವಾಪಸ್ ಪಡೆಯುತ್ತಾರೆ ಎಂದು ಪ್ರಶ್ನಿಸಿದರು.
ಮೀಸಲಾತಿ ಮರು ಹಂಚಿಕೆಯಿಂದ ಎಲ್ಲಾ ಸಮುದಾಯಕ್ಕೂ ಅನುಕೂಲವಾಗಿದೆ. ಬಂಜಾರ, ಭೋವಿ, ಪರಿಶಿಷ್ಟ ಜಾತಿಯಲ್ಲಿ ಎಡ-ಬಲ ಸಮುದಾಯಕ್ಕೂ ಒಳಿತಾಗಿದೆ. ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರಿಗೆ, ಬಣಜಿಗರಿಗೂ ಅನುಕೂಲ ಕಲ್ಪಿಸಿದ್ದೇವೆ. ನಮ್ಮ ಸರ್ಕಾರ ಎಲ್ಲಾ ವರ್ಗದ ಜನರಿಗೆ ಉತ್ತಮ ಆಡಳಿತ ಕೊಟ್ಟಿದೆ. ಅದೇ ಕಾರಣಕ್ಕೆ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ ಎಂದರು.
ನಮ್ಮ ಪಕ್ಷ 2018 ರಲ್ಲಿ ಪುರ್ಣ ಬಹುಮತ ಬಂದಿರಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಪೂರ್ಣ ಬಹುಮತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಕ್ಕೆ ತಂದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದರು.
ಬಿಜೆಪಿ ಕೆಲ ಶಾಸಕರು, ಸಚಿವರು ನನಗೆ ಕರೆ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಯಾವ ಕಾರಣದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಈಗ ಇರುವಂತಹ ಸಂಖ್ಯೆಯನ್ನೂ ದಾಟಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲ. ಆ ಪಕ್ಷದ ಶಾಸಕರಿಗಾಗಲಿ, ಆಕಾಂಕ್ಷಿಗಳಿಗಾಗಲಿ, ಅಭ್ಯರ್ಥಿಗಳಿಗಾಗಲಿ ಯಾರಿಗೂ ಗೆಲ್ಲುವ ಭರವಸೆ, ವಿಶ್ವಾಸವಿಲ್ಲ ಇಲ್ಲವಾಗಿದೆ ಎಂದು ಟೀಕಿಸಿದರು.