

ಹುಬ್ಬಳ್ಳಿ: ಎಪಿಎಂಸಿ ಸೆಸ್ ಸಂಪೂರ್ಣ ರದ್ದುಪಡಿಸುವುದು ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಪಿಎಂಸಿ ವರ್ತಕರು ಆರಂಭಿಸಿದ್ದ ಮುಷ್ಕರವನ್ನು ಕೆಲ ಷರತ್ತುಗಳೊಂದಿಗೆ ಹಿಂಪಡೆಯಲಾಗಿದೆ.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ನಡೆದ ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಯ ಎಪಿಎಂಸಿ ವರ್ತಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜುಲೈ 27ರಿಂದ ಎಪಿಎಂಸಿ ವಹಿವಾಟು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ವ್ಯಾಪಾರಸ್ಥರು ಇಳಿದಿದ್ದರು. ಈ ಮಧ್ಯೆ ರಾಜ್ಯ ಸರ್ಕಾರ ಎಪಿಎಂಸಿ ಸೆಸ್ 1.5 ರೂ.ನಿಂದ 35 ಪೈಸೆಗೆ ಇಳಿಸಿದ ಬಗ್ಗೆ ಮಾಹಿತಿ ತಿಳಿದ ಕಲಬುರ್ಗಿ, ಬೆಂಗಳೂರು ಇತರೆಡೆಯ ವ್ಯಾಪಾರಸ್ಥರು ಮುಷ್ಕರ ಕೈಬಿಟ್ಟಿದ್ದರು. ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಕೆಲ ಎಪಿಎಂಸಿಗಳಲ್ಲಿ ಮಾತ್ರ ಬಂದ್ ಮುಂದುವರಿದಿತ್ತು.
ಈ ಎಲ್ಲ ಹಿನ್ನೆಲೆಯಲ್ಲಿ ಬುಧವಾರ ಮತ್ತೆ ಸಭೆ ಸೇರಿದ ವರ್ತಕರು ಮುಷ್ಕರ ಮುಂದುವರಿಸುವುದೋ ಬೇಡವೋ? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಜನಪ್ರತಿನಿಧಿಗಳು, ಶಾಸಕರು, ಮಂತ್ರಿಗಳು ವರ್ತಕರ ಮುಷ್ಕರಕ್ಕೆ ಸ್ಪಂದಿಸದಿರುವುದಕ್ಕೆ ಕೆಲವರು ಆಕ್ರೋಶವನ್ನೂ ವ್ಯಕ್ತಪಡಿಸಿದರು. ಅರ್ಧಕ್ಕಿಂತ ಹೆಚ್ಚು ಜನರು ಮುಷ್ಕರ ಕೈಬಿಟ್ಟು ಸಾಂಕೇತಿಕ ಪ್ರತಿಭಟನೆ ಹಾಗೂ ಸರ್ಕಾರದ ಮೇಲೆ ಒತ್ತಡ ತರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಒಳಗೊಂದು ಹೊರಗೊಂದು ಬೇಡ:
ಪ್ರಸ್ತುತ ವ್ಯಾಪಾರಸ್ಥರ ಮೇಲೆ ಸೆಸ್ ಹೇರಿಕೆಯಿಂದ ಎಪಿಎಂಸಿಯಲ್ಲಿ ವ್ಯಾಪಾರ ಮಾಡಲು ಪ್ರಾಯೋಗಿಕವಾಗಿ ಸಮಸ್ಯೆಯಾಗುತ್ತದೆ.
ಎಪಿಎಂಸಿ ಒಳಗೆ ವ್ಯಾಪಾರ ಮಾಡುವವರಿಗೆ ಒಂದು ಕಾನೂನು, ಹೊರಗೆ ವ್ಯಾಪಾರ ಮಾಡುವವರಿಗೆ ಇನ್ನೊಂದು ಕಾನೂನು ಮಾಡಿದರೆ ಎಪಿಎಂಸಿ ವ್ಯವಸ್ಥೆಗೇ ಪೆಟ್ಟು ಬೀಳಲಿದೆ. ಹಾಗಾಗಿ ಏಕರೂಪದ ಕಾನೂನು ಜಾರಿ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಹಾವೇರಿಯ ಪಿ.ಡಿ. ಶಿರೂರ, ರಾಣೆಬೆನ್ನೂರಿನ ಎಸ್.ಕೆ. ಉಪ್ಪಿನ, ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಸಣ್ಣಕ್ಕಿ, ಎಪಿಎಂಸಿ ಸದಸ್ಯ ಚನ್ನು ಹೊಸಮನಿ, ಪ್ರಭುಲಿಂಗಪ್ಪ ಅಂಕಲಕೋಟಿ, ಗದಗ ಎಪಿಎಂಸಿಯ ತಾತನಗೌಡ ಪಾಟೀಲ, ದೇಸಾಯಿಗೌಡರ ಇತರರು ಅಭಿಪ್ರಾಯ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಅವರು ಎಲ್ಲರ ಅಭಿಪ್ರಾಯ ಪಡೆದು ನಂತರ ನಿರ್ಣಯಗಳನ್ನು ಪ್ರಕಟಿಸಿದರು.
ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಶಂಕ್ರಣ್ಣ ನೇಗಿನಹಾಳ, ರಾಜಣ್ಣ ಬತ್ಲಿ, ಜಿ.ಬಿ. ಜಂಬಗಿ, ಎಸ್.ಎನ್. ಹಂಪಣ್ಣವರ, ಆರ್.ಟಿ. ಸೋಳಂಕಿ, ಎಸ್.ಎಫ್. ಗದ್ದಿಕೇರಿ, ಎಂ.ವಿ. ಬೋರಟ್ಟಿ, ಇತರರು ಸಭೆಯಲ್ಲಿದ್ದರು.
ನಿರ್ಣಯಗಳು
* ಕೇಂದ್ರ ಸರ್ಕಾರ ಜಾರಿ ಮಾಡಿರುವ ಎಪಿಎಂಸಿ ಕಾಯ್ದೆಯಂತೆ ಒಂದು ದೇಶ ಒಂದು ತೆರಿಗೆ ರಾಜ್ಯದಲ್ಲೂ ಅನ್ವಯವಾಗಬೇಕು.
* ಪರ್ವಿುಟ್ ನೀಡುವ 35 ಎ, ಬಿ ರದ್ದು ಪಡಿಸಬೇಕು.
* ಸೆಸ್ ಎನ್ನುವ ಪದ ಅಳಿಸಿ ಹಾಕಬೇಕು.
* ಎಲ್ಲ ಬೇಡಿಕೆಗಳನ್ನು ಆ. 15ರೊಳಗೆ ಈಡೇರಿಸಬೇಕು.
* ನಂತರವೂ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವುದು.
ಬಂದ್ ಕರೆ ವಾಪಸ್
ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಎಪಿಎಂಸಿ ವರ್ತಕರು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಬಂದ್ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಧಾರವಾಡ ದಲಾಲ್ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ. ಶಂಕರಣ್ಣ ಮುನವಳ್ಳಿ ಅವರು ಎಪಿಎಂಸಿ ನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಒಂದು ದೇಶ ಒಂದು ಕಾಯ್ದೆಯನ್ನು ರಾಜ್ಯದಲ್ಲೂ ಜಾರಿ ಮಾಡಬೇಕು ಎಂದು ಮಾತುಕತೆ ನಡೆಸಿದರು. ಅದರಂತೆ ನಿರ್ದೇಶಕರು 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದಿದ್ದಾರೆ.