

ಬೀರೂರು: ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುರಸಭೆ ಮುಂಭಾಗ ಪೌರ ನೌಕರರು 4 ದಿನಗಳಿಂದ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಶನಿವಾರ ಅಂತ್ಯಗೊಳಿಸಿದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ಜಯಮ್ಮ ಮಾತನಾಡಿ, ಪೌರ ಸೇವಾ ನೌಕರರ ಹಲವಾರು ಬೇಡಿಗೆಗಳು ದಶಕಗಳಿಂದ ಬಾಕಿ ಉಳಿದಿತ್ತು. ಬೇಡಿಕೆಗಳನ್ನು ಶಾಸಕ ಕೆ.ಎಸ್.ಆನಂದ್ ಹಾಗೂ ಪುರಸಭೆ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಕ್ರಮ ತೆಗೆದುಕೊಂಡಿದೆ ಎಂದರು.
ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದ ಮೊದಲ ವೈದ್ಯರಿದ್ದಂತೆ. ಪಟ್ಟಣದ ಸ್ವಚ್ಛತೆ ಕಾಪಾಡುವ ಜತೆಗೆ ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ ಶ್ರಮವಹಿಸುತ್ತಾರೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿರುವುದು ಸಂತಸ ತಂದಿದೆ ಎಂದರು.
ಪೌರ ಸೇವಾ ನೌಕರರು ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಅನುಮತಿ ನೀಡುತ್ತಿದ್ದಂತೆ ಪುರಸಭೆ ಮುಂಭಾಗದಿಂದ ಮಹಾತ್ಮ ಗಾಂಧಿ ವೃತ್ತದವರಗೆ ವಾದ್ಯದೊಂದಿಗೆ ಬಂದ ಪೌರ ಸೇವಾ ನೌಕರರು ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಪುರಸಭೆ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯರಾದ ಬಿ.ಆರ್.ಮೋಹನ್‌ಕುಮಾರ್, ಬಿ.ಎಲ್.ಮೋಹನ್‌ಕುಮಾರ್, ಆಶ್ರಯ ಸಮಿತಿ ಸದಸ್ಯ ಮುಬಾರಕ್, ಚಲುವರಾಜ್, ಸಿಬ್ಬಂದಿ ಇದ್ದರು.