ಮುಷ್ಕರ ಜಂಜಾಟಕ್ಕೆ ಸಿಗುತ್ತಾ ಮುಕ್ತಿ?

24-5
ಬೆಳಗಾವಿಯಲ್ಲೇ ಕೆಎಟಿ ಪೀಠ ಸ್ಥಾಪಿಸುವಂತೆ ಒತ್ತಾಯಿಸಿ ಹಿರಿಯ ನ್ಯಾಯವಾದಿಗಳು 2014ರಲ್ಲಿ ಧರಣಿ ನಡೆಸಿದ್ದರು.
Published on

ರವಿ ಗೋಸಾವಿ ಬೆಳಗಾವಿ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಬೆಳಗಾವಿಯಲ್ಲೇ ಸ್ಥಾಪಿಸುವಂತೆ ಒತ್ತಾಯಿಸಿ ದೀರ್ಘ ಹೋರಾಟ ನಡೆಸಿದ ಸ್ಥಳೀಯ ವಕೀಲರು ಯಶ ಕಂಡು ಸಂಭ್ರಮಿಸಿದ್ದರು. ಆದರೆ, ಅದೇ ಮುಷ್ಕರ ಕುರಿತು ದಾಖಲಾಗಿದ್ದ ಪ್ರಕರಣದಿಂದ ಅವರೆಲ್ಲ ಎಂಟು ವರ್ಷವಾದರೂ ಮುಕ್ತರಾಗಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಲು ತಮಗೆ ಸೂಕ್ತ ಆದೇಶ ನೀಡುವಂತೆ ಕೋರಿ ನಗರ ಪೊಲೀಸ್ ಆಯುಕ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನ್ಯಾಯವಾದಿಗಳ ಮುಷ್ಕರಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 411/2014 ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ತನಿಖಾಧಿಕಾರಿ 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯ ವಿಚಾರಣೆಯನ್ನೂ ನಡೆಸಿತ್ತು. ಇದೂ ಸೇರಿ ಕೆಎಟಿ ಪೀಠಕ್ಕಾಗಿ ರಾಜ್ಯಾದ್ಯಂತ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ಆದೇಶದಲ್ಲಿ ಇಸ್ವಿ ತಪ್ಪಾಗಿದ್ದರಿಂದ ಪ್ರಕರಣವನ್ನು ಕಾನೂನಾತ್ಮಕವಾಗಿ ಅಂತ್ಯಗೊಳಿಸುವುದು ಪೊಲೀಸರನ್ನೂ ಪೇಚಿಗೆ ಸಿಲುಕಿಸಿತ್ತು.

ನ್ಯಾಯವಾದಿಯೊಬ್ಬರು ತಮ್ಮ ಕಕ್ಷಿದಾರರಾದ ಕೆಎಟಿ ಪೀಠದ ಹೋರಾಟಗಾರ ವಕೀಲರ ವಿರುದ್ಧದ ಪ್ರಕರಣವನ್ನು ಸರ್ಕಾರ ರದ್ದುಗೊಳಿಸಿದೆ. ಸರ್ಕಾರಿ ಆದೇಶದಲ್ಲಿನ ಗೊಂದಲ ಹಾಗೂ ಮುಷ್ಕರಕ್ಕೆ ಸಂಬಂಧಿಸಿದಂತೆ ಇನ್ನಿತರ ಪ್ರಕರಣಗಳನ್ನು ಹಿಂಪಡೆದಿರುವ ಬಗ್ಗೆ ಉಲ್ಲೇಖಿಸಿ, ಸ್ಪಷ್ಟ ನಿರ್ದೇಶನ ನೀಡುವಂತೆ ಸೆ.8ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಕಾನೂನುನಾತ್ಮಕ ಕ್ರಮಕ್ಕಾಗಿ ವರದಿ ಸಿದ್ಧಪಡಿಸಿದ ಪೊಲೀಸ್ ಆಯುಕ್ತರು, ಸರ್ಕಾರಿ ಆದೇಶದಲ್ಲಿ 411/2014ರ ಬದಲಾಗಿ 411/2017 ಎಂದಾಗಿದೆ. ಆದರೆ 411/2017 ಎಂಬ ಪ್ರಕರಣ ಕೆಎಟಿ ಹೋರಾಟ ಹಾಗೂ ನ್ಯಾಯವಾದಿಗಳಿಗೆ ಸಂಬಂಧಿಸಿದ್ದಲ್ಲ. ಸರ್ಕಾರಿ ಆದೇಶ 411/2014ಕ್ಕೆ ಸಂಬಂಧಿಸಿದ್ದು ಎಂದು ಪರಿಗಣಿಸುವುದಾದರೆ, ಮುಂದಿನ ಕಾನೂನು ಕ್ರಮ ಜರುಗಿಸಲು ಸೂಕ್ತ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.28ರಂದು 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ಅಂದು ಸ್ಪಷ್ಟ ಆದೇಶ ಹೊರಬೀಳಲಿದೆ ಎಂಬ ನಿರೀಕ್ಷೆಯಲ್ಲಿ ನ್ಯಾಯವಾದಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net