

ಶನಿವಾರಸಂತೆ: ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪೂರ್ವ ವಿದ್ಯಾರ್ಥಿಗಳ ಸಂಘ ಮತ್ತು ಕ್ರೀಡಾ ಸಂಘ ನಿಡ್ತ ವತಿಯಿಂದ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಗೆ ಲ್ಯಾಪ್‌ಟಾಪ್ ಹಾಗೂ ಶಾಲಾ ಗ್ರಂಥಾಲಯಕ್ಕೆ ಟೇಬಲ್, ಕಪಾಟುಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಮಾತ್ರ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತದೆ. ಪಾಲಕರು ಕಾನ್ವೆಂಟ್ ವ್ಯಾಮೋಹವನ್ನು ತೊರೆದು ಸರ್ಕಾರಿ ಶಾಲೆಯ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಗ್ರಾ.ಪಂ.ಅಧ್ಯಕ್ಷ ಅಶೋಕ್ ಗ್ರಂಥಾಲಯಕ್ಕೆ ಪೀಠೋಪಕರಣಗಳನ್ನು ಕೊಡುಗೆ ನೀಡಿದರು. ಮಾಜಿ ಸೈನಿಕ ಮುರುಗನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ವತಿಯಿಂದ 91 ವರ್ಷದ ನಿವೃತ್ತ ಶಿಕ್ಷಕ ಷಣ್ಮುಖಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಪೂರ್ವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರೇಖಾ ಅಶೋಕ್, ಜಿ.ಎಸ್.ಗಣೇಶ್, ಯೋಗೇಶ್, ಮಲ್ಲೇಶ್, ಗ್ರಾ.ಪಂ. ಸದಸ್ಯರು ಹಾಜರಿದ್ದರು.