ಮುಳ್ಳೂರು ಗ್ರಾಮ ಪಂಚಾಯಿತಿಗೆ ಎಸ್.ಕಮಲಾ ಅಧ್ಯಕ್ಷೆ

15-KGL-2,,
Published on

ಕೊಳ್ಳೇಗಾಲ : ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಸ್.ಕಮಲಾ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಮಹದೇವಮ್ಮ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್.ಕಮಲಾ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಾಗೇಂದ್ರ ಅವಿರೋಧ ಆಯ್ಕೆ ಘೋಷಿಸಿದರು. ಒಟ್ಟು 15 ಸದಸ್ಯರ ಪೈಕಿ 11 ಸದಸ್ಯರು ಚುನಾವಣೆಯಲ್ಲಿ ಹಾಜರಾಗಿದ್ದು, 4 ಸದಸ್ಯರು ಗೈರಾಗಿದ್ದರು.

ನೂತನ ಅಧ್ಯಕ್ಷೆ ಎಸ್.ಕಮಲಾ ಮಾತನಾಡಿ, ಮುಳ್ಳೂರು ಗ್ರಾಪಂ ಅಧ್ಯಕ್ಷೆಯಾಗಲು ಸದಸ್ಯರು ಬೆಂಬಲ ನೀಡಿದ್ದಾರೆ. ವಾರ್ಡ್‌ನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದು, ಇದೀಗ ಹೆಚ್ಚಿನ ಜವಾಬ್ದಾರಿಯನ್ನು ಸದಸ್ಯರು ಹಾಗೂ ಗ್ರಾಮದ ಮುಖಂಡರು ವಿಶ್ವಾಸವಿಟ್ಟು ನೀಡಿದ್ದಾರೆ. ಇದನ್ನು ಸಮರ್ಪಕವಾಗಿ ನಿಭಾಯಿಸಲಾಗುವುದು ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ದೊರೆತಿರುವ ಸದಾವಕಾಶವನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಾಗುವುದು. ಹಾಲಿ ಸದಸ್ಯರು, ಮಾಜಿ ಸದಸ್ಯರು ಹಾಗೂ ಮುಖಂಡರು ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್, ಸದಸ್ಯರಾದ ನಂಜುಂಡಸ್ವಾಮಿ, ಮಹದೇವಮ್ಮ, ಎಂ.ದೊರೆರಾಜ್, ಚಂದ್ರಬಾಬು, ಸಿದ್ದಶೆಟ್ಟಿ, ಗೋಪಾಲ್, ರುಕ್ಕುರಮ್ಯ, ಶೇಖರ್, ಮಹದೇವಮ್ಮ ಹಾಜರಿದ್ದರು. ಸದಸ್ಯರಾದ ಚಂದ್ರಕಲಾ, ಕಾಂತಮ್ಮ, ಶಶಿಕಲಾ, ರತಿ ಗೈರಾಗಿದ್ದರು.

ಅಧ್ಯಕ್ಷರಿಗೆ ಸನ್ಮಾನ: ನೂತನ ಅಧ್ಯಕ್ಷ ಎಸ್.ಕಮಲಾ ಅವರನ್ನು ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮುಳ್ಳೂರು ಮಂಜುನಾಥ್, ರೈತ ಮುಖಂಡ ಷಣ್ಮುಖಸ್ವಾಮಿ, ಕೃಷ್ಣನಾಯಕ, ಪುಟ್ಟಸ್ವಾಮಿ, ನಾಗರಾಜುಗೌಡ, ಲೋಕೇಶ್ ನಾಯಕ ಇತರರು ಸನ್ಮಾನಿಸಿದರು. ಮುಖಂಡರಾದ ರಾಚಶೆಟ್ಟಿ, ವೆಂಕಟೇಶ್, ಪುಟ್ಟಮಾದಯ್ಯ, ಗೌಡರು ರೇಚಪ್ಪ, ಕರವೇ ಪ್ರವೀಣ್ ಶೆಟ್ಟಿ ಬಣ ಅಧ್ಯಕ್ಷ ಜಗದೀಶ್ ಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net